ನಮ್ಮದು ಅಂಬೇಡ್ಕರ್ ರಕ್ತ, ಭಯಪಡುವ ಜಾಯಮಾನ ನನ್ನದಲ್ಲ: ರಮೇಶ್ ಜಿಗಜಿಣಗಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
'RSS ತಂಟೆಗೆ ಹೋದವರು ಯಾರೂ ಉಳಿದಿಲ್ಲ' ಎಂದಿದ್ದ ಬಿಜೆಪಿ ಸಂಸದ
ಪ್ರಿಯಾಂಕ್ ಖರ್ಗೆ/ರಮೇಶ್ ಜಿಗಜಿಣಗಿ
ಬೆಂಗಳೂರು : ಆರೆಸ್ಸೆಸ್ (RSS) ನೋಂದಣಿ ಕುರಿತಾದ ವಿಚಾರ ತೀವ್ರ ಚರ್ಚೆ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ. "RSS ತಂಟೆಗೆ ಹೋದವರು ಯಾರೂ ಉಳಿದಿಲ್ಲ, ದಲಿತರಿಗೇಕೆ ಬೇಕು RSS ವಿಷಯ?" ಎಂಬ ರಮೇಶ್ ಜಿಗಜಿಣಗಿ ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಈ ಸಂಬಂಧ ಎಕ್ಸ್‌ನಲ್ಲಿ ʼವಾರ್ತಾಭಾರತಿʼಯಲ್ಲಿ ಪ್ರಕಟಗೊಂಡಿರುವ ಸುದ್ದಿಯ ಪೋಸ್ಟ್ ಹಂಚಿಕೊಂಡಿರುವ ಅವರು, "ದಲಿತರಿಗೇಕೆ ಬೇಕು RSS ವಿಷಯ" ಬಿಜೆಪಿಯ ಸಂಸದರಾದ ರಮೇಶ್ ಜಿಗಜಣಗಿಯವರು ನನಗೆ ಹೇಳಿರುವ ಮತ್ತು ಕೇಳಿರುವ ಪ್ರಶ್ನೆ. ಈ ಪ್ರಶ್ನೆಯು ವಿವಿಧ ಆಯಾಮಗಳಲ್ಲಿ ವಿಮರ್ಶಿಸಬೇಕಾದ ಸಂಗತಿಯಾಗಿದೆ ಎಂದು ಹೇಳುತ್ತಾ ಅವರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
"ದಲಿತ ಸಮುದಾಯದವರೇ ಆಗಿರುವ ರಮೇಶ್ ಜಿಗಜಣಗಿಯವರಿಗೆ RSS ಗರ್ಭಗುಡಿಯೊಳಗೆ ಪ್ರವೇಶ ಸಿಗದಿರುವ ಹತಾಶೆಯ ಮಾತೇ? ಶ್ರೇಣೀಕೃತ ವ್ಯವಸ್ಥೆಯ ಮೂಲಭೂತವಾದವನ್ನು ನಂಬಿರುವ RSS ಸಹವಾಸಕ್ಕೆ ದಲಿತರು ಹೋಗಬೇಡಿ ಎಂಬ ಎಚ್ಚರಿಕೆಯ ಮಾತುಗಳೇ? ಸಮಾಜದಲ್ಲಿನ ಮೇಲರಿಮೆಯ ಮನಸ್ಥಿತಿಯ ಜನರ ಹಿತಾಶಕ್ತಿ ಕಾಯಲು ರೂಪುಗೊಂಡಿರುವ RSSನ್ನು ಪ್ರಶ್ನೆ ಮಾಡಲು ದಲಿತನಾಗಿ ನಿನಗೆ ಅರ್ಹತೆ ಇಲ್ಲ ಎಂದು ನನಗೆ ಹೇಳಿರುವ ಕುಹುಕದ ಮಾತುಗಳೇ? RSSನಂತಹ ವ್ಯವಸ್ಥೆಯನ್ನು ಸಂವಿಧಾನದ ಹಾದಿಗೆ ತರಲು ದಲಿತರಿಗೆ ಸಾಧ್ಯವಿಲ್ಲ ಎಂಬ ಹತಾಶೆಯ ಮಾತುಗಳೇ? ಎಂದು ಪ್ರಶ್ನಿಸಿದ್ದಾರೆ.
"RSS ತಂಟೆಗೆ ಹೋದವರು ಯಾರೂ ಉಳಿದಿಲ್ಲ" ಎಂಬ ಎಚ್ಚರಿಕೆಯನ್ನೂ ಕೊಟ್ಟಿರುವ ರಮೇಶ್ ಜಿಗಜಣಗಿಯವರು RSSನ ಭಯಕ್ಕೊಳಪಟ್ಟು ಹೇಳಿರುವುದೋ ಅಥವಾ ನನ್ನನ್ನು ಭಯಪಡಿಸಲು ಹೇಳಿರುವುದೋ? ಈ ಬೆದರಿಕೆಯ ಹಿಂದಿರುವ ಕಾರಣಗಳೇನು? "ಯಾರೂ ಉಳಿದಿಲ್ಲ" ಎಂದರೆ ಏನರ್ಥ RSS ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸುವವರನ್ನು ಮುಗಿಸುತ್ತದೆಯೇ? ಎಂದು ಅವರು ಕೇಳಿದ್ದಾರೆ.
ರಮೇಶ್ ಜಿಗಜಣಗಿಯವರೇ, ನಾನು ಬಾಬಾ ಸಾಹೇಬರ ಸಿದ್ದಾಂತದವನು, ಪ್ರಶ್ನಿಸುವ ಧೈರ್ಯ ಮತ್ತು ವೈಚಾರಿಕತೆ ಅವರಿಂದಲೇ ಬಂದಿರುವುದು, ಬಾಬಾ ಸಾಹೇಬರನ್ನು ನಂಬಿದವರಿಗೆ "ಅಂಜಿಕೆ" ತಿಳಿದಿರುವುದಿಲ್ಲ. ನಾನು ಸಂವಿಧಾನದ ರಕ್ಷಣೆಯ ನೆರಳಲ್ಲಿರುವವನು, ಸಂವಿಧಾನದಡಿಯಲ್ಲಿ ಮಾನ್ಯತೆಯೇ ಇಲ್ಲದವರಿಗೆ ಭಯಪಡುವ ಜಾಯಮಾನ ನನ್ನದಲ್ಲ. ನಾನು ಅಂಜುವುದು ನೈತಿಕತೆಗೆ ಹೊರತು, ಬೆದರಿಕೆಗಳಿಗಲ್ಲ, ಏಕೆಂದರೆ ನಮ್ಮದು ಅಂಬೇಡ್ಕರ್‌ರವರ ರಕ್ತ ಎಂದು ತಿರುಗೇಟು ನೀಡಿದ್ದಾರೆ.