ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರಚನೆ ಸಂಬಂಧ ಪರಿಶೀಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು : ರಾಜ್ಯದಲ್ಲಿ ಹೋಂಸ್ಟೇಗಳ ಸ್ಥಾಪನೆ, ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ನಿಯಂತ್ರಿಸಲು ಸಮಗ್ರ ನೀತಿ ಮತ್ತು ಶಾಸನಬದ್ಧ ಚೌಕಟ್ಟನ್ನು ರೂಪಿಸುವ ಸಂಬಂಧ ಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟಾ ಗ್ರಾಮದ ಹೋಂಸ್ಟೇ ಒಂದರ ನೋಂದಣಿ ರದ್ದುಪಡಿಸಿದ್ದ ಸರಕಾರದ ಕ್ರಮವನ್ನು ಪ್ರಶ್ನಿಸಿ ಅದರ ಮಾಲೀಕ ಪಿ.ಎ. ಪೊನ್ನಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೋಂಸ್ಟೇ ಕ್ಷೇತ್ರದ ಹೆಚ್ಚುತ್ತಿರುವ ಪ್ರಾಮುಖ್ಯತೆ ಮತ್ತು ಅವುಗಳ ವಿರುದ್ಧದ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ, ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚಿಸಿ, ರಾಜ್ಯದಲ್ಲಿ ಹೋಂಸ್ಟೇಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆಯನ್ನು ನಿಯಂತ್ರಿಸುವ ಸಮಗ್ರ ನೀತಿ ಮತ್ತು ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸುವ ಸಂಬಂಧ ಪರಿಶೀಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಕಾಯ್ದೆಯು ಹೋಂಸ್ಟೇಗಳು, ಪ್ರವಾಸೋದ್ಯಮ ವ್ಯಾಪಾರ ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಆದರೆ, ಹೋಂಸ್ಟೇ ಕಾರ್ಯಾಚರಣೆಯು ಹಲವಾರು ಶಾಸನಬದ್ಧ ಮತ್ತು ನಿಯಂತ್ರಕ ಕ್ಷೇತ್ರಗಳನ್ನು ಒಳಗೊಂಡ ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ. ಈ ಕಾಯ್ದೆಯಡಿಯಲ್ಲಿ ನೋಂದಣಿ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಪರಿಹರಿಸಲಾಗುವುದಿಲ್ಲ. ಆದ್ದರಿಂದ, ಹೋಂಸ್ಟೇ ಕೇವಲ ವಾಣಿಜ್ಯ ಸಂಸ್ಥೆಯಲ್ಲಿ ಬದಲಾಗಿ ಸಾರ್ವಜನಿಕರು ವಾಸಿಸುವ ಸ್ಥಳವಾಗಿದೆ. ದೀರ್ಘಾವಧಿಯವರೆಗೆ ಹಾಗೂ ಆಹಾರ, ವಸತಿ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ ಸ್ಥಳವಾಗಿದೆ. ಪರಿಣಾಮವಾಗಿ, ಸಾರ್ವಜನಿಕ ಸುರಕ್ಷತೆ, ಆರೋಗ್ಯ, ನೈರ್ಮಲ್ಯ, ಭದ್ರತೆ, ಗ್ರಾಹಕ ರಕ್ಷಣೆ ಮಹತ್ವದ್ದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಕುಟುಂಬಗಳು ನಡೆಸುವ ಸಣ್ಣ ಹೋಂಸ್ಟೇಗಳು ಹಾಗೂ ವಾಣಿಜ್ಯ ಉದ್ದೇಶದ ದೊಡ್ಡ ರೆಸಾರ್ಟ್ ಮಾದರಿಯ ಹೋಂಸ್ಟೇಗಳ ನಡುವೆ ಸ್ಪಷ್ಟ ವ್ಯತ್ಯಾಸವಿರಬೇಕು. ನಿಯಮಗಳು ಸಣ್ಣ ಮಾಲೀಕರಿಗೆ ಹೊರೆಯಾಗಬಾರದು. ಆದರೆ, ದೊಡ್ಡ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಸ್ತುತ ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಮಾಲೀಕರು ಯಾವ ಇಲಾಖೆಯಿಂದ ಅನುಮತಿ ಪಡೆಯಬೇಕೆಂಬ ಗೊಂದಲದಲ್ಲಿದ್ದಾರೆ. ಆದ್ದರಿಂದ, ಏಕರೂಪದ ನಿಯಂತ್ರಣ ಚೌಕಟ್ಟು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಅರ್ಜಿದಾರರಿಗೆ ಅವಕಾಶ:
ಹಾಲಿ ಪ್ರಕರಣಲ್ಲಿ ಹೋಂಸ್ಟೇ ಪರವಾನಗಿ ರದ್ದುಗೊಳಿಸುವುದಕ್ಕೂ ಮುನ್ನ ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡಿಲ್ಲ. 'ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸುಗಮಗೊಳಿಸುವಿಕೆ ಮತ್ತು ನಿಯಂತ್ರಣ) ಕಾಯ್ದೆ-2015' ರ ನಿಬಂಧನೆಗಳನ್ನು ಪಾಲಿಸದೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಆದ್ದರಿಂದ, ಪರವಾನಗಿ ರದ್ದು ಮಾಡಿರುವ ಆದೇಶವನ್ನು ಶೋಕಾಸ್ ನೋಟಿಸ್ ಆಗಿ ಪರಿವರ್ತಿಸಿ ಆದೇಶಿಸಿರುವ ನ್ಯಾಯಪೀಠ, ಅದಕ್ಕೆ ಉತ್ತರಿಸಲು ಅರ್ಜಿದಾರ ಮಾಲೀಕರಿಗೆ ಅವಕಾಶ ನೀಡಿದೆ.
ಹೈಕೋರ್ಟ್ ನಿರ್ದೇಶನಗಳು:
* ಹೋಂಸ್ಟೇಳು ಸಾಮಾನ್ಯವಾಗಿ ನಗರಗಳ ಹೊರಭಾಗಗಲ್ಲಿರುವುದರಿಂದ ಅಗತ್ಯ ಮಾನದಂಡಗಳು ಇರುವುದಿಲ್ಲ. ಆದ್ದರಿಂದ, ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
* ಪ್ರವಾಸಿಗರ ಆರೋಗ್ಯದ ದೃಷ್ಟಿಯಿಂದ ಅಡುಗೆ ಮನೆಯ ನೈರ್ಮಲ್ಯ ಕಾಯ್ದುಕೊಳ್ಳಬೇಕು ಹಾಗೂ ಆಹಾರ ಸುರಕ್ಷತೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೈರ್ಮಲ್ಯ ಕಾಪಾಡುವುದು, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಒಳಚರಂಡಿ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆಗೆ ಸಂಬಂಧಿಸಿದ ಕನಿಷ್ಠ ಮಾನದಂಡಗಳನ್ನು ರಚಿಸಬೇಕು.
* ಹೋಂಸ್ಟೇಗಳು ಹೆಚ್ಚಾಗಿ ವಸತಿ, ಅರೆ-ನಗರ, ಗ್ರಾಮೀಣ, ಕರಾವಳಿ, ಪರಿಸರ-ಸೂಕ್ಷ್ಮ ಅಥವಾ ಬೆಟ್ಟದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಅಲ್ಲಿಗೆ ತೆರಳುವ ಪ್ರವಾಸಿಗರು ಕಟ್ಟಡ ನಿಯಮಾವಳಿಗಳು ಹಾಗೂ ವಸತಿ-ವಲಯ ನಿಯಮಗಳ ಪ್ರಕಾರ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
* ಸಾರ್ವಜನಿಕ ಸುರಕ್ಷತೆ, ಅಪರಾಧ ಚಟುವಟಿಕೆ, ಕಳ್ಳಸಾಗಣೆ, ಸೈಬರ್ ಅಪರಾಧಗಳನ್ನು ನಿಯಂತ್ರಿಸುವುದು ಮತ್ತು ತನಿಖಾ ಸಂಸ್ಥೆಗಳೊಂದಿಗೆ ಹೋಂಸ್ಟೇ ಮಾಲೀಕರ ಸಹಕರಿಸಬೇಕು. ಜತೆಗೆ, ಎಲ್ಲ ಅತಿಥಿಗಳ ಗುರುತಿನ ಚೀಟಿಗಳ ಪರಿಶೀಲನೆ ಮಾಡಬೇಕು.
* ಪಾರದರ್ಶಕತೆ ಮತ್ತು ಗ್ರಾಹಕ ರಕ್ಷಣೆಯ ಅವಶ್ಯಕತೆಯಿದ್ದು, ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುಬೇಕು.
* ಸಣ್ಣ ಮತ್ತು ದೊಡ್ಡ ವಾಣಿಜ್ಯ ಹೋಂಸ್ಟೇಗಳ ನಡುವಿನ ವರ್ಗೀಕರಣವನ್ನು ಕಡ್ಡಾಯವಾಗಿ ಮಾಡಬೇಕು.
ಪ್ರಕರಣವೇನು?
ಏಪ್ರಿಲ್ ತಿಂಗಳಿನಲ್ಲಿ ಅರ್ಜಿದಾರರ ಹೋಂಸ್ಟೇನಲ್ಲಿ ತಂಗಿದ್ದ ಅಮೆರಿಕದ ಪ್ರವಾಸಿ ಮಹಿಳೆ ಮೇಲೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಜಿಲ್ಲಾಡಳಿತ ಅರ್ಜಿದಾರರ ಹೋಂಸ್ಟೇ ನೋಂದಣಿಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.