ವಿಧಾನ ಪರಿಷತ್ ಚುನಾವಣೆ | ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು, ಮುಖಭಂಗ ಅನುಭವಿಸಿದ ಜೆಡಿಎಸ್
► ವಿಪಕ್ಷಗಳಿಗೆ ತಟ್ಟಿದ ಅಡ್ಡ ಮತದಾನದ ಬಿಸಿ; ಕಾಂಗ್ರೆಸ್-5, ಬಿಜೆಪಿ-2, ಜೆಡಿಎಸ್-0 ► ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚುವರಿ 11 ಮತಗಳು ಚಲಾವಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಗುರುವಾರ ವಿಧಾನಸೌಧದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್-5, ಬಿಜೆಪಿ-2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ಅಭ್ಯರ್ಥಿ ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಬಿ.ಕೆ.ಹರಿಪ್ರಸಾದ್, ಬಿ.ಎಸ್.ಶಿವಣ್ಣ, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ.ಮೋಹನ್ ಹಾಗೂ ವಿನಯ್ ಕಾರ್ತಿಕ್ ಪ್ರಕಾಶ್, ಬಿಜೆಪಿಯಿಂದ ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ ಗೆಲುವು ಸಾಧಿಸಿದ್ದು, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಗೋವಿಂದರಾಜು ಸೋಲು ಕಂಡಿದ್ದಾರೆ.
ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ನಾಲ್ಕು ಹಾಗೂ ಬಿಜೆಪಿ ಎರಡು ಸ್ಥಾನಗಳಲ್ಲಿ ಸುಲಭ ಗೆಲುವು ಸಾಧಿಸಲು ಅವಕಾಶವಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಐದನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ಅಚ್ಚರಿ ಮೂಡಿಸಿದ ಐದನೇ ಅಭ್ಯರ್ಥಿ ಗೆಲುವು:
ಕಾಂಗ್ರೆಸ್ ಪಕ್ಷದ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಲು ರೂಪಿಸಿದ ರಣತಂತ್ರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಯಶಸ್ವಿಯಾದರು. ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಆದ ಅಡ್ಡ ಮತದಾನವು ವಿನಯ್ ಕಾರ್ತಿಕ್ ಪ್ರಕಾಶ್‍ಗೆ ಪಾಲಿಗೆ ವರವಾಗಿ ಪರಿಣಮಿಸಿತು. ಅಲ್ಲದೇ, ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಎಂಟು ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅವರು ಅಚ್ಚರಿ ಮೂಡಿಸಿದರು.
ಒಂದು ಮತ ಅಸಿಂಧು: 62 ಶಾಸಕರನ್ನು ಹೊಂದಿರುವ ಬಿಜೆಪಿಯು ತನ್ನ ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ಹಂಚಿಕೆ ಮಾಡಿ, ಹೆಚ್ಚುವರಿಯಾದ ಎರಡು ಮತಗಳನ್ನು ಮಿತ್ರ ಪಕ್ಷ ಜೆಡಿಎಸ್ ಅಭ್ಯರ್ಥಿಗೆ ಹಂಚಿಕೆ ಮಾಡಿತ್ತು. ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜ್ ಪಾಟೀಲ್‍ಗೆ 29 ಮತಗಳು ಬಂದರೆ, ರಘು ಕೌಟಿಲ್ಯಗೆ ಮೊದಲ ಪ್ರಾಶಸ್ತ್ಯದಲ್ಲಿ ಕೇವಲ 27 ಮತಗಳು ಲಭಿಸಿತ್ತು.
ರಘು ಕೌಟಿಲ್ಯ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಗೆಲುವಿಗೆ ಅಗತ್ಯವಿರುವ 28 ಮತಗಳ ಕೋಟಾ ತಲುಪದ ಹಿನ್ನೆಲೆಯಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳ ಸಹಾಯದೊಂದಿಗೆ ಅವರು ಪ್ರಯಾಸದ ಗೆಲುವು ಸಾಧಿಸಿದರು. ಈ ಪೈಕಿ ರಘು ಕೌಟಿಲ್ಯ ಪರ ಚಲಾವಣೆಗೊಂಡಿದ್ದ ಮೊದಲ ಪ್ರಾಶಸ್ತ್ಯದ ಒಂದು ಮತ ಸರಿಯಾಗಿ ಗುರುತು ಮಾಡದ ಹಿನ್ನೆಲೆಯಲ್ಲಿ ಅಸಿಂಧು ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಬಿಜೆಪಿ-ಜೆಡಿಎಸ್‍ಗೆ ತಟ್ಟಿದ ಅಡ್ಡ ಮತದಾನದ ಬಿಸಿ:
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿರುವುದು, ವಿಪಕ್ಷಗಳಿಗೆ ತಲೆಬಿಸಿಯಾಗುವಂತೆ ಮಾಡಿದೆ. ಜೆಡಿಎಸ್ ಪಕ್ಷವು ವಿಧಾನಸಭೆಯಲ್ಲಿ 18 ಶಾಸಕರನ್ನು ಹೊಂದಿದೆ. ಅಲ್ಲದೆ, ಬಿಜೆಪಿಯ ಹೆಚ್ಚುವರಿ ಎರಡು ಮತಗಳನ್ನು ಜೆಡಿಎಸ್‍ಗೆ ಹಂಚಿಕೆ ಮಾಡಲಾಗಿತ್ತು.
ಆದರೆ, ಚುನಾವಣಾ ಫಲಿತಾಂಶ ಪ್ರಕಟವಾದಾಗ ಜೆಡಿಎಸ್ ಅಭ್ಯರ್ಥಿ ಕೇವಲ 14 ಮತಗಳನ್ನು ಮಾತ್ರ ಪಡೆದಿದ್ದರು. ಒಂದು ಕಡೆ ಜೆಡಿಎಸ್‍ಗೆ ತನ್ನದೆ ಪಕ್ಷದ ನಾಲ್ವರು ಶಾಸಕರು ಕೈ ಕೊಟ್ಟಿದ್ದರೆ, ಮಿತ್ರ ಪಕ್ಷ ಬಿಜೆಪಿ ಹಂಚಿಕೆ ಮಾಡಿದ್ದ ಎರಡು ಮತಗಳು ಸಿಕ್ಕಿಲ್ಲ.
‘ಕೈ’ ಹಿಡಿದ ಬಿಜೆಪಿ ಉಚ್ಛಾಟಿತರು:
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 11 ಮತಗಳು ಚಲಾವಣೆಗೊಂಡಿವೆ.
ಚಲಾವಣೆಯಾದ ಮತಗಳ ಸಂಖ್ಯೆ-221: ವಿಧಾನಸಭೆಯು 222 ಸಂಖ್ಯಾಬಲವನ್ನು ಹೊಂದಿದೆ. ಈ ಪೈಕಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರವಾಗಿ ಚಲಾವಣೆಗೊಂಡ ಒಂದು ಮತ ಅಸಿಂಧು ಆದ ಹಿನ್ನೆಲೆಯಲ್ಲಿ, 221 ಮತಗಳನ್ನು ಪರಿಗಣಿಸಲಾಯಿತು. ಕಾಂಗ್ರೆಸ್ ಪಕ್ಷದ ಐದು ಅಭ್ಯರ್ಥಿಗಳ ಪರವಾಗಿ 150 ಮತಗಳು, ಬಿಜೆಪಿ ಪರವಾಗಿ 57(ದ್ವಿತೀಯ ಪ್ರಾಶಸ್ತ್ಯ ಸೇರಿ) ಹಾಗೂ ಜೆಡಿಎಸ್ ಪಕ್ಷದ ಪರವಾಗಿ 14 ಮತಗಳು ಚಲಾವಣೆಯಾದವು.
ಅಭ್ಯರ್ಥಿಗಳು ಪಡೆದ ಮತಗಳ ವಿವರ :
ಕಾಂಗ್ರೆಸ್: ಬಿ.ಕೆ.ಹರಿಪ್ರಸಾದ್-30, ಬಿ.ಎಸ್.ಶಿವಣ್ಣ-30, ತಿಪ್ಪಣ್ಣಪ್ಪ ಕಮಕನೂರ್-29, ಪಿ.ವಿ.ಮೋಹನ್-29 ಹಾಗೂ ವಿನಯ್ ಕಾರ್ತಿಕ್-32.
ಬಿಜೆಪಿ: ಲಿಂಗರಾಜ್ ಪಾಟೀಲ್-29, ರಘು ಕೌಟಿಲ್ಯ-28.
ಜೆಡಿಎಸ್: ಗೋವಿಂದರಾಜು-14(ಸೋಲು).
ಕಾಂಗ್ರೆಸ್ ದೂರು ತಿರಸ್ಕಾರ: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತದಾನದ ಗೌಪ್ಯತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಚುನಾವಣಾಧಿಕಾರಿ ದೂರನ್ನು ತಿರಸ್ಕರಿಸಿದರು.
‘ವಿಧಾನ ಪರಿಷತ್ತು ರಾಜ್ಯದ ಶಾಸನಾತ್ಮಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಜನಪರ ಕಾನೂನುಗಳ ಪರಿಶೀಲನೆ, ನೀತಿಗಳ ಪರಿಷ್ಕರಣೆ ಹಾಗೂ ಆಡಳಿತಾತ್ಮಕ ಕಾರ್ಯವೈಖರಿಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸದನ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಪಕ್ಷದ ನೂತನ ಸದಸ್ಯರು, ತಮ್ಮ ಅನುಭವ, ಬದ್ಧತೆ ಮತ್ತು ಜನಪರ ಕಾಳಜಿಯ ಮೂಲಕ ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ರಾಜ್ಯದ ಹಿತಾಸಕ್ತಿಗಳನ್ನು ಸಮರ್ಥವಾಗಿ ಪ್ರತಿನಿಧಿಸುವುದರೊಂದಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲಿದ್ದಾರೆ ಎಂಬ ವಿಶ್ವಾಸವಿದೆ’
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
‘ರಾಜ್ಯ ಸರಕಾರಕ್ಕೆ ಬೆಂಬಲ ನೀಡಲು ಎಲ್ಲ ಪಕ್ಷದವರು ಸೇರಿ ಕಾಂಗ್ರೆಸ್ ಪರವಾಗಿ ಮತ ಹಾಕಿದ್ದಾರೆ. ನನಗೆ 28 ಮತಗಳು ಬರಬಹುದು ಎಂದು ನಿರೀಕ್ಷೆಯಿತ್ತು. ಆದರೆ, ಅದಕ್ಕಿಂತ ಹೆಚ್ಚು 32 ಮತಗಳು ಬಂದಿವೆ. ಸರಕಾರ ಒಳ್ಳೆಯ ಕೆಲಸ ಮಾಡುತ್ತದೆ ಎಂಬ ಕಾರಣಕ್ಕಾಗಿ ಶಾಸಕರು ಬೆಂಬಲ ಕೊಟ್ಟಿರಬಹುದು’
-ವಿನಯ್ ಕಾರ್ತಿಕ್ ಪ್ರಕಾಶ್, ಕಾಂಗ್ರೆಸ್ ಅಭ್ಯರ್ಥಿ
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ ಎಲ್ಲರಿಗೂ ಧನ್ಯವಾದಗಳು. ಪ್ರಿಯಾಂಕ್ ಖರ್ಗೆ ಇಲ್ಲದೆ ಇದ್ದಿದ್ದರೆ ನನಗೆ ಅವಕಾಶ ಸಿಗುತ್ತಿರಲಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸದನದ ಒಳಗೆ ಹಾಗೂ ಸರಕಾರದ ಮಟ್ಟದಲ್ಲಿ ಅವಕಾಶ ವಂಚಿತರ ಧ್ವನಿಯಾಗಿ ಕೆಲಸ ಮಾಡುತ್ತೇನೆ’
-ತಿಪ್ಪಣ್ಣಪ್ಪ ಕಮಕನೂರು, ಕಾಂಗ್ರೆಸ್ ಅಭ್ಯರ್ಥಿ
‘ನನಗೆ ಹಂಚಿಕೆಯಾಗಿದ್ದ ಒಂದು ಮತ ಅಸಿಂಧು ಆಗಿದೆ. ಲಿಂಗರಾಜ್ ಪಾಟೀಲ್ ಅವರಿಗೆ ಹಂಚಿಕೆಯಾಗಿದ್ದ ಮೂರು ಮತಗಳು ಕಡಿಮೆಯಾಗಿವೆ. ಈ ಬಗ್ಗೆ ಪಕ್ಷ ಗಮನ ಹರಿಸಲಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅವಕಾಶ ನೀಡಿದ್ದಾರೆ’
-ರಘು ಕೌಟಿಲ್ಯ, ಬಿಜೆಪಿ ಅಭ್ಯರ್ಥಿ