×
Ad

2008ರ ದುಂಡ ದಲಿತ ದೌರ್ಜನ್ಯ ಪ್ರಕರಣ: 10 ಮಂದಿ ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

Update: 2023-11-18 21:47 IST

ಬೆಂಗಳೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ 2008ರಲ್ಲಿ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣ ಸಂಬಂಧ 10 ಆರೋಪಿಗಳಿಗೆ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆಯಾಗಿರುವ ಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿದ್ದೀನ್ ಖಾಝಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ(ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಎಲ್ಲ ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂ.ಗಳ ದಂಡ ವಿಧಿಸಿದೆ. ಜತೆಗೆ, ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ವಿವಿಧ ಹಂತದ(ತಿಂಗಳುಗಳಲ್ಲಿ) ಶಿಕ್ಷೆ ವಿಧಿಸಿ ಒಟ್ಟು 85 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದಲ್ಲಿ ಅಪರಾಧಿಗಳಾಗಿ ಸುದೀಪ್(ಎ1), ಜಯಮ್ಮ(ಎ2), ನಟರಾಜ್(ಎ3), ಶ್ರೀನಿವಾಸ್(ಎ4), ಶಂಕರಯ್ಯ(ಎ5), ಶಿವಕುಮಾರ್(ಎ6), ಹರ್ಷಾ (ಎ7), ಶಿವಲಿಂಗಯ್ಯ(ಎ8), ಪ್ರಕಾಶ್(ಎ9), ಗೌರಮ್ಮ(ಎ10), ಕಲ್ಪನಾ(ಎ11) ಎಂಬವರು ಅಪರಾಧಿಗಳು ಎಂದು ನ.1ರಂದು ಹೈಕೋರ್ಟ್ ತೀರ್ಪು ನೀಡಿತ್ತು. ನ.16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಆದರೆ, ಪ್ರಕರಣದ 8ನೆ ಆರೋಪಿಯಾಗಿದ್ದ ಶಿವಲಿಂಗಯ್ಯ ಎಂಬುವವರು ಅರ್ಜಿ ವಿಚಾರಣೆ ನಡುವೆ ಮೃತಪಟ್ಟಿರುವುದರಿಂದ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ.

ವಿಚಾರಣಾ ನ್ಯಾಯಾಲಯ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳು ಅನುಮಾನಾಸ್ಪಾದ ಆಗಿವೆ ಎಂದು ಹೇಳಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆದರೆ, ಪ್ರತ್ಯಕ್ಷ್ಯದರ್ಶಿಗಳ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿಲ್ಲ. ಆ ಮೂಲಕ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಸಿವಿಲ್ ಪ್ರಕರಣವೊಂದಕ್ಕೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಸುದೀಪ್ ಎಂಬುವರ ವಿರುದ್ಧ ಮೇಲ್ಮನವಿದಾರೆ ಲಕ್ಷ್ಮಮ್ಮ ದೂರು ನೀಡುವುದಕ್ಕೆ ಪೊಲೀಸ್ ಠಾಣೆಗೆ ಹೋಗಿದ್ದರು. ಇದರಿಂದ ಸಿಟ್ಟಾಗಿದ್ದ ಗ್ರಾಮದ ಸವರ್ಣೀಯರು 2008ರ ಆ.14ರಂದು ದುಂಡ ಗ್ರಾಮದ ಹರಿಜನ ಕಾಲೋನಿಗೆ ನುಗ್ಗಿ ತಮ್ಮ ಜಾತಿಯನ್ನು ಪ್ರಸ್ತಾಪಿಸಿ ನಿಂದನೆ ಮಾಡಿದ್ದಾರೆ. ಜತೆಗೆ, ದೊಣ್ಣೆಗಳು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ರಕ್ತಸ್ರಾವವಾಗುವರೆಗೆ ಗಾಯಗೊಳಿಸಿದ್ದರು.

ಈ ಸಂಬಂಧ ದೂರು ದಾಖಲಾಗಿದ್ದು, ದೂರಿನ ಸಂಬಂಧ ದಂಡಿನಶಿವರ ಪೊಲೀಸರು ತನಿಖೆ ನಡೆಸಿ 11 ಮಂದಿ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ತುಮಕೂರಿನ ವಿಚಾರಣಾ ನ್ಯಾಯಾಲಯ 2011ರ ಜೂನ್ 23ರಂದು ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಾಸಿಕ್ಯೂಷನ್ ಪ್ರಶ್ನೆ ಮಾಡಿರಲಿಲ್ಲ. ಬಳಿಕ ಸಂತ್ರಸ್ತೆ ಲಕ್ಷ್ಮಮ್ಮ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News