ಗ್ರಾ.ಪಂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ನೂ 208 ಸೇವೆಗಳು ಲಭ್ಯ : ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈಗ ನೀಡಲಾಗುತ್ತಿರುವ 81 ಸೇವೆಗಳ ಜೊತೆ ಇನ್ನೂ 208 ಸೇವೆಗಳನ್ನು ಬಾಪೂಜಿ ಸೇವಾ ಕೇಂದ್ರಗಳ ಸೇವಾಸಿಂಧು ಪೋರ್ಟಲ್ ಮೂಲಕ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 2024-25ನೆ ಸಾಲಿನ ಆಯವ್ಯಯದಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಒದಗಿಸಲಾಗುತ್ತಿರುವ ಎಲ್ಲ ಸೇವೆಗಳನ್ನು ಬಾಪೂಜಿ ಸೇವಾ ಕೇಂದ್ರಗಳಲ್ಲೂ ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಗಿತ್ತು, ಅದರಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾಗದ ನಾಗರಿಕರಿಗೆ ಅನುಕೂಲವಾಗುವಂತೆ ಮೊದಲ ಹಂತದಲ್ಲಿ 208 ಸೇವೆಗಳನ್ನು ಬಳಸುವ ಸೌಲಭ್ಯವನ್ನು ನೀಡಲಾಗುವುದು. ಸೇವಾ ಸಿಂಧು ಪೋರ್ಟಲ್ ಮೂಲಕ ಒದಗಿಸಲಾಗುತ್ತಿರುವ 46 ವಿವಿಧ ಇಲಾಖೆಗಳ 800ಕ್ಕಿಂತಲೂ ಹೆಚ್ಚು ಸೇವೆಗಳನ್ನು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಒದಗಿಸುವುದರಿಂದ ಗ್ರಾಮೀಣ ಜನತೆಗೆ ಒಂದೇ ಸೂರಿನಡಿ ಎಲ್ಲ ಇಲಾಖೆಗಳ ಸೇವೆಗಳನ್ನು ನೀಡಿದಂತಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.