ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ವಿರುದ್ಧ ವಿವಾದಾತ್ಮಕ ಹೇಳಿಕೆ; BJP ಎಂಎಲ್‌ಸಿ ರವಿಕುಮಾರ್‌ ಗೆ ಹೈಕೋರ್ಟ್ ತರಾಟೆ

"ಇದು ಅತಿಯಾಯಿತು, ಇದನ್ನು ಕ್ಷಮಿಸಲಾಗದು" ಎಂದ ನ್ಯಾಯಾಲಯ

Update: 2026-08-07 23:29 IST

ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌

ಬೆಂಗಳೂರು: ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಐಎಎಸ್‌ ಅಧಿಕಾರಿ ಫೌಝಿಯಾ ತರನ್ನುಮ್ ಅವರು ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ವಿರುದ್ಧ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಫೌಝಿಯಾ ತರನ್ನುಮ್ ಅವರ ಬಗ್ಗೆ ವಿವಾದಾತ್ಮ ಹೇಳಿಕೆ ನೀಡಿದ ಆರೋಪದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ರವಿಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ನಾಗರಿಕ ಸೇವೆಯಲ್ಲಿರುವ ಅಧಿಕಾರಿ ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಾರೆ ಎಂದು ಹೇಳಿಕೆ ನೀಡುವುದನ್ನು ಸಹಿಸಲಾಗದು ಎಂದು ಕಟುವಾಗಿ ನುಡಿಯಿತು‌.

ಫೌಝಿಯಾ ತರನ್ನುಮ್ ಅವರು ಕರ್ನಾಟಕದ ಐಎಎಸ್‌ ಅಧಿಕಾರಿ. ನಿಮ್ಮ ಹೇಳಿಕೆಗಳನ್ನು ಒಪ್ಪಲಾಗದು. ಬೇಕಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ, ಇದು ಅತಿಯಾಯಿತು. ಇದನ್ನು ಕ್ಷಮಿಸಲಾಗದು. ನೀವು ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡಿದ್ದೀರಾ? ಇದಕ್ಕೆ ಅವಕಾಶ ನೀಡಲಾಗದು. ನಿಮ್ಮ ನಾಲಗೆಯ ಮೇಲೆ ಎಚ್ಚರಿಕೆ ಇರಲಿ. ಇಂಥ ಕ್ಷುಲ್ಲಕ ಪ್ರಕರಣಗಳಿಂದಾಗಿ ಕೊಲೆ ಮತ್ತು ಸುಲಿಗೆಯಂಥ ಪ್ರಕರಣಗಳು ಹತ್ತು ವರ್ಷಗಳಿಂದ ಬಾಕಿ ಉಳಿದಿವೆ. ನಿಮ್ಮ ನಾಲಿಗೆಯ ಮೇಲೆ ಎಚ್ಚರಿಕೆ ಇಲ್ಲದೇ ಇರುವುದರಿಂದ ಪ್ರಕರಣಗಳು ಏರುಗತಿಯಲ್ಲಿವೆ ಎಂದು ಹೇಳಿತು.

ಯಾವುದೇ ಪಕ್ಷವಾಗಿರಲಿ, ನೀವೆಲ್ಲರೂ ಇದೆಲ್ಲವನ್ನೂ ನಿಲ್ಲಿಸಬೇಕು. ಬರೀ ಕೆಸರೆರಚಾಟವೇ ಆಗಿದೆ. ಯಾರೂ ನೀತಿ-ನಿರೂಪಣೆಗಳ ಬಗ್ಗೆ ಮಾತನಾಡುತ್ತಿಲ್ಲ. ನೀವೇನು ಮಾತನಾಡುತ್ತಿದ್ದೀರಿ ಎಂಬುದರ ಮೇಲೆ ಜನರಿಗೆ ಆಸಕ್ತಿ ಇಲ್ಲ. ಬದಲಿಗೆ ಅವರಿಗೆ ಜನ ಕಲ್ಯಾಣದ ಮೇಲಷ್ಟೇ ಆಸಕ್ತಿ ಇರುತ್ತದೆ. ಧರ್ಮದ ಆಧಾರದ ಮೇಲೆ ಐಎಎಸ್‌ ಅಧಿಕಾರಿಯ ಕಡೆಗೆ ಹೇಗೆ ಬೆರಳು ಮಾಡುತ್ತೀರಿ? ನಾವು ಯಾತ್ರೆಯ ಬಗ್ಗೆ ಮಾತನಾಡುತ್ತಿಲ್ಲ. ಇಂಥ ಹೇಳಿಕೆಗಳನ್ನು ನೀಡಬಾರದು ಎಂದಿತು.

ರವಿಕುಮಾರ್‌ ಪರ ವಕೀಲ ಎಂ. ವಿನೋದ್‌ ಕುಮಾರ್‌ ಅವರು, ಬಿಜೆಪಿ ನಾಯಕನನ್ನು ಬಂಧಿಸಿದ್ದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ರವಿಕುಮಾರ್‌ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ. ಇದರಲ್ಲಿ ದುರುದ್ದೇಶವಿರಲಿಲ್ಲ ಎಂದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎನ್‌. ಜಗದೀಶ್‌ ಹಾಗೂ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಅನೂಪ್‌ ಕುಮಾರ್‌ ಅವರು, ರವಿಕುಮಾರ್‌ ಅವರಿಗೆ ಅಹವಾಲುಗಳಿದ್ದರೆ ಮುಖ್ಯ ಕಾರ್ಯದರ್ಶಿಗೆ ದೂರು ನೀಡಬಹುದಿತ್ತೇ ಹೊರತು ಸಾರ್ವಜನಿಕವಾಗಿ ಇಂಥ ಹೇಳಿಕೆ ನೀಡಬಾರದಿತ್ತು ಎಂದರು.

ಅಂತಿಮವಾಗಿ ನ್ಯಾಯಪೀಠ, ಪ್ರಕರಣದ ದಾಖಲೆಗಳನ್ನು ಸಲ್ಲಿಸಿ. ಏನು ಮನವಿ ನೀಡಲಾಗಿದೆ. ಯಾವ ಪ್ರತಿಭಟನೆಗೆ ಅವರು ಅನುಮತಿ ಕೋರಿದ್ದಾರೆ. ರಾಷ್ಟ್ರಧ್ವಜ ಕೊಂಡೊಯ್ಯುತ್ತೇವೆ ಎಂದು ಬರೆದಿದ್ದು, ಅದನ್ನು ಕೊಂಡೊಯ್ಯಲು ತಡೆದಿದ್ದರೆ ಪರಿಶೀಲಿಸಲಾಗುವುದು ಎಂದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್‌ 20ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News