ಕೆಪಿಎಸ್‌ಸಿ ನೇಮಕಾತಿ ಹಗರಣ; ಅನುಮತಿ ಇಲ್ಲದೆ ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ನಿರ್ಬಂಧ

Update: 2026-08-07 23:37 IST

ಸಾಂದರ್ಭಿಕ ಚಿತ್ರ (AI)

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ, ಕೈಗಾರಿಕಾ ವಿಸ್ತರಣಾಧಿಕಾರಿ, ಪಶು ವೈದ್ಯಾಧಿಕಾರಿಗಳು ಸೇರಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಅಂತಿಮ ವರದಿ ಸಲ್ಲಿಸಬಾರದು ಎಂದು ಪೊಲೀಸರು ಮತ್ತು ಸಿಐಡಿಗೆ ಹೈಕೋರ್ಟ್ ನಿರ್ಬಂಧ ಹೇರಿದೆ.

ಇದೇ ವೇಳೆ, ಈಗಾಗಲೇ ಆಯ್ಕೆ ಆಗಿರುವ ಇತರ ಅಭ್ಯರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ಸರ್ಕಾರ ಭರವಸೆ ನೀಡಿದೆ.

ಕೆಪಿಎಸ್‌ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯ ತೆಗೆದುಕೊಳ್ಳುವ ನೆಪದಲ್ಲಿ, ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಸಲ್ಲಿಸಲು ಮುಂದಾಗುತ್ತಿದ್ದಾರೆ, ಆ ಮೂಲಕ ತನಿಖಾ ವರದಿಯನ್ನು ದಾಖಲೆಗಳಲ್ಲಿ ಸೇರಿಸಲು ಸಿದ್ಧತೆ ನಡೆಸಿದ್ದಾರೆ. ಆದ್ದರಿಂದ, ತನಿಖೆ ಪೂರ್ಣಗೊಂಡಿದ್ದರೂ ಸಹ ಪ್ರಕರಣಗಳ ಅಂತಿಮ ವರದಿಯನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಸಲ್ಲಿಸದಂತೆ ನ್ಯಾಯಾಲಯ ಸೂಚಿಸಬೇಕು ಎನ್ನುವುದು ಅರ್ಜಿದಾರರ ವಾದವಾಗಿದೆ. ಆದ್ದರಿಂದ, ಕೋರ್ಟ್‌ ಅನುಮತಿ ಇಲ್ಲದೆ ಯಾವುದೇ ಪ್ರಕರಣದ ಅಂತಿಮ ವರದಿಗಳನ್ನು ವಿಚಾರಣಾ ನ್ಯಾಯಾಲಯಗಳ ಮುಂದೆ ಸಲ್ಲಿಸಬಾರದು ಎಂದು ನಿರ್ದೇಶನ ನೀಡಿತು.

ಜತೆಗೆ, ಸಂಬಂಧಪಟ್ಟ ಠಾಣೆಗಳ ಪೊಲೀಸರು ಹಾಗೂ ಸಿಐಡಿ ಎರಡೂ ನಡೆಸಿದ ತನಿಖೆಯ ಕುರಿತು ರಾಜ್ಯ ಸರ್ಕಾರಿ ಅಭಿಯೋಜಕರು ಸಲ್ಲಿಸಿದ ತನಿಖೆಯ ವಾಸ್ತವ ಸ್ಥಿತಿಗತಿ ವರದಿಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಗಳಿಗೆ ವಿವರವಾದ ಆಕ್ಷೇಪಣೆಗಳನ್ನು ಸಲ್ಲಿಸಲು ಹತ್ತು ದಿನ ಕಾಲಾವಕಾಶ ನೀಡಿ, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಎಸ್‌ಪಿಪಿ ಬಿ.ಎನ್‌. ಜಗದೀಶ್‌ ಅವರು, ಅರ್ಜಿಗಳ ಸಂಬಂಧ ವಿವರವಾದ ಆಕ್ಷೇಪಣೆಗಳನ್ನು ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಬೇಕೆಂದು ಕೋರಿದರು.

ಅದಕ್ಕೆ ಆಕ್ಷೇಪಿಸಿದ ಅರ್ಜಿದಾರರ ವಕೀಲ ವೆಂಕಟೇಶ್‌ ದಳವಾಯಿ, ಹಿಂದೆ ಇದೇ ರೀತಿಯ ಆರೋಪ ಪ್ರಕರಣಗಳು ಬಂದಾಗ ತನಿಖಾ ಸಂಸ್ಥೆಗಳು ಆತುರದಲ್ಲಿ ತನಿಖೆಯ ಅಂತಿಮ ವರದಿಗಳನ್ನು ಸಲ್ಲಿಸಿ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಉದಾಹರಣೆಗಳಿವೆ. ಈಗಲೂ ಸಹ ಹಾಗೆಯೇ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯಗಳಿಗೆ ಅಂತಿಮ ವರದಿಗಳನ್ನು ಸಲ್ಲಿಸದಂತೆ ನಿರ್ಬಂಧ ವಿಧಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆಯ್ಕೆಯಾಗಿರುವ ಕೆಲ ಅಭ್ಯರ್ಥಿಗಳ ಪರ ವಕೀಲರು, ತನಿಖೆಯ ನೆಪದಲ್ಲಿ ಪೊಲೀಸರು ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿರುದ್ಧ ಬಲವಂತದ ಕ್ರಮ ಜರುಗಿಸಲು ಮುಂದಾಗಿದ್ದಾರೆ ಎಂದರು.

ಎಸ್‌ಪಿಪಿ ವಾದ ಮುಂದುವರಿಸಿ, ಆಯ್ಕೆಯಾದ ಯಶಸ್ವಿ ಅಭ್ಯರ್ಥಿಗಳು ತನಿಖೆಗೆ ಸಹಕರಿಸಿದರೆ ಅವರ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸುವುದಿಲ್ಲ. ಈಗಾಗಲೇ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾರೆಂದು ಆರೋಪಿಸಲಾದ ಆಯ್ಕೆಯಾಗಿರುವ ಅಭ್ಯರ್ಥಿಯ ವಿರುದ್ಧ ಎಫ್‌ಐಆರ್‌ ಹಾಕಲಾಗಿದ್ದು, ಅದನ್ನು ರದ್ದುಗೊಳಿಸುವಂತೆ ಆ ಅಭ್ಯರ್ಥಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ವಿವರಿಸಿದರು.

ಆಗ ನ್ಯಾಯಪೀಠ, ಯಶಸ್ವಿ ಅಭ್ಯರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ಈ ಆದೇಶ ಕೋರ್ಟ್‌ ಮುಂದಿರುವವರಿಗೆ ಮಾತ್ರವಲ್ಲದೆ ಎಲ್ಲ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿ ಅರ್ಜಿ ವಿಚಾರಣೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News