ಬಸವರಾಜ ಹೊರಟ್ಟಿ ರಾಜೀನಾಮೆ ವಿಚಾರದಲ್ಲಿ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ಸಲ್ಲ: ರಮೇಶ್ ಬಾಬು
ರಮೇಶ್ ಬಾಬು
ಬೆಂಗಳೂರು: ‘ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ಸಂಬಂಧ ಪ್ರತಿಪಕ್ಷ ಬಿಜೆಪಿ ಮುಖಂಡರು ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ’ ಎಂದು ಕೆಪಿಸಿಸಿ ಮಾಧ್ಯಮ-ಸಂವಹನ ವಿಭಾಗದ ಅಧ್ಯಕ್ಷ ರಮೇಶ್‍ಬಾಬು ಆಕ್ಷೇಪಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಸಭಾಪತಿ ಸ್ಥಾನಕ್ಕೆ ನಿಯಮಾವಳಿ ಅನ್ವಯ ಹೊರಟ್ಟಿರವರು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ಪರಿಷತ್ತಿನಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಪಕ್ಷದ ಸಂಖ್ಯೆ ಕಡಿಮೆ ಆದಾಗ ಸಭಾಪತಿ-ಉಪಸಭಾಪತಿ, ಸ್ವಯಿಚ್ಛೆಯಿಂದ ರಾಜಿನಾಮೆ ನೀಡುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಕಡಿಮೆಯಾದರು, ಸಭಾಪತಿ ಸ್ಥಾನದ ಮೇಲಿನ ಗೌರವದಿಂದ ಕಾಂಗ್ರೆಸ್ ಅವರ ರಾಜೀನಾಮೆಗೆ ಒತ್ತಾಯಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಪರಿಷತ್ತಿನಲ್ಲಿ ಕಾಂಗ್ರೆಸ್ 39, ಬಿಜೆಪಿ-24, ಜೆಡಿಎಸ್ 6 ಮತ್ತು ಒಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಸಂಖ್ಯಾಬಲದ ಆಧಾರದ ಮೇಲೆ ಮತ್ತು ಆ.13ರಿಂದ ಅಧಿವೇಶನ ಪ್ರಾರಂಭ ಆಗುತ್ತಿರುವುದಿಂದ ಹೊರಟ್ಟಿರವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ಹಿಂದಿನ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದರು.
ಆದರೆ, ಬಿಜೆಪಿಯ ಬಸವರಾಜ್ ಬೊಮ್ಮಾಯಿ, ಸಭಾಪತಿ ಸ್ಥಾನಕ್ಕೆ ಹೊರಟ್ಟಿ ನೀಡಿರುವ ರಾಜೀನಾಮೆಗೆ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ. 2021ರಲ್ಲಿ ಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಪ್ರತಾಪ ಚಂದ್ರಶೆಟ್ಟಿ ಸಭಾಪತಿ ಆಗಿದ್ದರು. ಆ ವೇಳೆ ಸಂಖ್ಯಾಬಲದ ಕಾರಣ ಅವರ ರಾಜೀನಾಮೆಗೆ ಒತ್ತಾಯಿಸಿ ಕಲಾಪಗಳನ್ನು ನಡೆಸದಂತೆ ಬೆದರಿಕೆ ಮತ್ತು ಒತ್ತಾಯದ ಮೂಲಕ ರಾಜೀನಾಮೆ ಪಡೆದ ಬಿಜೆಪಿ, ಇಂದು ರಾಜಕೀಯ ಭಾಷಣ ಮಾಡಲು ಹೊರಟಿರುವುದು ಆ ಪಕ್ಷದ ನೈತಿಕ ಪತನಕ್ಕೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಎಸ್‍ಐಆರ್ ನಿಂದ 1ಕೋಟಿಗೂ ಅಧಿಕ ಮತದಾರರನ್ನು ತಮ್ಮ ಹಕ್ಕಿನಿಂದ ವಂಚಿಸುತ್ತಿರುವ ವಿಷಯದಲ್ಲಿನ ಜನರ ಗಮನ ಬೇರೆಡೆಗೆ ಸೆಳೆಯುವ ಕಾರಣಕ್ಕಾಗಿ ಸಭಾಪತಿ ವಿಚಾರವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇತಿಹಾಸ ತಿರುಚಲು ಪ್ರಯತ್ನ ಮಾಡುವ ಬಿಜೆಪಿ ನಾಯಕರು ಸಭಾಪತಿ ಸ್ಥಾನವನ್ನು ರಾಜಕೀಯಕ್ಕೆ ಎಳೆದು ತಂದಿರುವುದು ಅವರ ರಾಜಕೀಯ ಎಳಸುತನಕ್ಕೆ ಸಾಕ್ಷಿ’
-ರಮೇಶ್ ಬಾಬು, ಕೆಪಿಸಿಸಿ ಮಾಧ್ಯಮ-ಸಂವಹನ ವಿಭಾಗದ ಅಧ್ಯಕ್ಷ