ಸಾಮಾಜಿಕ ಭದ್ರತೆ ಯೋಜನೆಯಡಿ 51,720 ಫಲಾನುಭವಿಗಳ ಪಿಂಚಣಿ ರದ್ದು: ಡಾ.ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಪಿಂಚಣಿ ಪಡೆಯುವ ಫಲಾನುಭವಿಗಳ ಪೈಕಿ 51,720(ಪ್ರಸಕ್ತ ಸಾಲಿನ ಆ.13ರವರೆಗೆ) ಫಲಾನುಭವಿಗಳ ಪಿಂಚಣಿ ರದ್ದುಪಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ರೂಪಕಲಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಫಲಾನುಭವಿಗಳು ಹಾಗೂ ಎಪಿಎಲ್ ಫಲಾನುಭವಿಗಳ ಮಾಹಿತಿಯನ್ನು ಪಡೆದು, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷತಾ ಯೋಜನೆ, ವಿಧವಾ ವೇತನ, ಮನಸ್ವಿನಿ, ಮೈತ್ರಿ ಹಾಗೂ ಅಂಗವಿಕಲ ಪಿಂಚಣಿ ಯೋಜನೆಗಳಡಿ ಒಟ್ಟು 23,14,544 ಸಂದೇಹಾಸ್ಪದ ಫಲಾನುಭವಿಗಳೆಂದು ಗುರುತಿಸಲಾಗಿದೆ ಎಂದು ಹೇಳಿದರು.
ಈ ಪೈಕಿ ಫಲಾನುಭವಿಗಳ ಪರಿಶೀಲನೆಯ ನಂತರ ಅರ್ಹರೆಂದು ಕಂಡು ಬಂದ ಫಲಾನುಭವಿಗಳಿಗೆ ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಿನಿಂದ ಪಿಂಚಣಿ ಪಾವತಿಸಲಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶಗಳಿಗೆ 12 ಸಾವಿರ ರೂ. ಹಾಗೂ ನಗರ ಪ್ರದೇಶಗಳಿಗೆ 17 ಸಾವಿರ ರೂ.ಗಳಂತೆ ನಿಗದಿಪಡಿಸಿದ್ದು, ಈ ಆದಾಯ ಮಿತಿಯನ್ನು 32 ಸಾವಿರ ರೂ.ಗಳಿಗೆ ಮಾರ್ಪಡಿಸಿ ಆದೇಶಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಪಿಂಚಣಿ ಪಡೆಯುವ ಎಲ್ಲ ಫಲಾನುಭವಿಗಳಿಗೆ ಪಿಂಚಣಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಕುರಿತು ದಾಖಲಾತಿಗಳನ್ನು ಸಂಬಂಧಿತ ತಾಲೂಕು ಕಚೇರಿಗೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿ ತಿಳುವಳಿಕೆ ಪತ್ರ ಜಾರಿ ಮಾಡಲಾಗಿದೆ ಮತ್ತು ಅವರ ಮೊಬೈಲ್ ಸಂಖ್ಯೆಗೆ ದಾಖಲಾತಿ ಸಲ್ಲಿಸಲು ಎಸ್‍ಎಂಎಸ್ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ವೇತನ, ಇಂದಿರಾಗಾಂಧಿ ಅಂಗವಿಕಲ ವೇತನ, ಸಂಧ್ಯಾಸುರಕ್ಷ ಯೋಜನೆ, ಮನಸ್ವಿನಿ, ಮೈತ್ರಿ ಯೋಜನೆಗಳ ಫಲಾನುಭವಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ಈ ಯೋಜನೆಗಳಡಿ ಆದಾಯ ಪ್ರಮಾಣ ಪತ್ರ, ಯುಡಿಐಡಿ ಕಾರ್ಡ್, ವಯಸ್ಸಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಬಂಧಪಟ್ಟ ತಾಲೂಕು ಕಚೇರಿಗೆ ಸಲ್ಲಿಸಿದಲ್ಲಿ ದಾಖಲಾತಿ ಪರಿಶೀಲಿಸಿ ಅರ್ಹತಾ ಮಾನದಂಡ ಪೂರೈಸಿದಲ್ಲಿ, ಪಿಂಚಣಿ ಮರು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಂಯೋಜನೆ ಆ್ಯಪ್ ಮೂಲಕ ಸಂದೇಹಾಸ್ಪದ ಫಲಾನುಭವಿಗಳೆಂದು ಗುರುತಿಸಿರುವ ಪಿಂಚಣಿದಾರರ ಮನೆಗೆ ಗ್ರಾಮ ಆಡಳಿತಾಧಿಕಾರಿಗಳು ಭೇಟಿ ನೀಡಿ ಅಗತ್ಯವಿರುವ ದಾಖಲೆಗಳನ್ನು ಸ್ಥಳದಲ್ಲಿಯೆ ಪಡೆದು ಪರಿಶೀಲಿಸಿ, ಅರ್ಹರಿಗೆ ಪಿಂಚಣಿ ಮರು ಚಾಲನೆಗೊಳಿಸಲು ನಿಯಮಾನುಸಾರ ಕ್ರಮ ವಹಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ರಾಜ್ಯ ಸರಕಾರವು ಬಿಪಿಎಲ್ ಕಾರ್ಡುದಾರರಿಗೆ ವಾರ್ಷಿಕ 1.20 ಲಕ್ಷ ರೂ.ಗಳ ಆದಾಯ ಮಿತಿ ನಿಗದಿ ಮಾಡಿದೆ. ಆದರೆ, ಪಿಂಚಣಿದಾರರಿಗೆ 32 ಸಾವಿರ ರೂ.ಗಳನ್ನು ನಿಗದಿಪಡಿಸಿರುವುದು ಸರಿಯಲ್ಲ. ಇದರಿಂದಾಗಿ, ವೃದ್ಧರು ಹಾಗೂ ಪಿಂಚಣಿಯ ಮೇಲೆ ಅವಲಂಬಿತರಾಗಿರುವ ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದುದರಿಂದ, ಈ ಸಂಬಂಧ ಸರಕಾರ ಗಮನ ಹರಿಸಬೇಕು ಎಂದು ರೂಪಕಲಾ ಆಗ್ರಹಿಸಿದರು.