28.75 ಕೋಟಿ ರೂ.ವೆಚ್ಚದಲ್ಲಿ ಸಂಗೊಳ್ಳಿ-ಬೇವಿನಕೊಪ್ಪ ನಡುವೆ ಸೇತುವೆ : ಜಿ.ಪರಮೇಶ್ವರ್

Update: 2026-08-17 21:29 IST

ಬೆಂಗಳೂರು : ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಬೈಲಹೊಂಗಲ ಮತಕ್ಷೇತ್ರದ ಸಂಗೊಳ್ಳಿ-ಬೇವಿನಕೊಪ್ಪ ಮಧ್ಯದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 28.75 ಕೋಟಿ ರೂ.ಗಳ ಗುತ್ತಿಗೆ ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಹಾಂತೇಶ್ ಕೌಜಲಗಿ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಪರವಾಗಿ ಉತ್ತರಿಸಿದ ಅವರು, ಈ ಸೇತುವೆ ನಿರ್ಮಾಣ ಕಾಮಗಾರಿಯನ್ನು 2018ರ ಮಾ.18ರಂದು ಪ್ರಾರಂಭಿಸಲಾಗಿದ್ದು, 30 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿಪಡಿಸಲಾಗಿತ್ತು ಎಂದು ಹೇಳಿದರು.

ಸದ್ಯ ಕಾಮಗಾರಿಯು ಅರ್ಧಕ್ಕೆ ನಿಂತಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 3.29 ಕೋಟಿ ರೂ.ಗಳ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ. ಸೇತುವೆಯ ಕಟ್ಟಡ ಭಾಗ 344.60 ಮೀಟರ್ ಉದ್ದ ಹಾಗೂ 1205.60 ಮೀಟರ್ ಅಪ್ರೋಚ್ ರಸ್ತೆ ಉದ್ದವಿರುತ್ತದೆ. ಸೇತುವೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಕೂಡು ರಸ್ತೆಯ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಈ ಸೇತುವೆಯ ಸಂಗೊಳ್ಳಿ ಕಡೆಯ ಕೂಡು ರಸ್ತೆಯ ಮಟ್ಟವು ಮುಳುಗಡೆಯಾಗುತ್ತಿರುವುದರಿಂದ, ಆ ರಸ್ತೆಯನ್ನು ಹೆಚ್ಚುವರಿ 413 ಮೀಟರ್ ಉದ್ದಕ್ಕೆ ಕೈಗೊಳ್ಳಲು ಯೋಜಿಸಲಾಗಿದೆ. ಬದಲಾದ ವಿನ್ಯಾಸದಂತೆ ಹಾಗೂ ಸ್ಥಳದ ಅವಶ್ಯಕತೆಗೆ ಅನುಗುಣವಾಗಿ ಕಾಮಗಾರಿಯನ್ನು ಕೈಗೊಳ್ಳುವಲ್ಲಿ ಉಂಟಾಗುತ್ತಿರುವ ಪರಿಷ್ಕೃತ ಅಂದಾಜಿಗೆ ಅನುಮೋದನೆ ಪಡೆದು, ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ, ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News