×
Ad

ನ.26 ರಿಂದ 72 ಗಂಟೆಗಳ ‘ಮಹಾಧರಣಿ-ರಾಜಭವನ ಚಲೋ’

Update: 2023-11-25 20:20 IST

ಬೆಂಗಳೂರು: ಕೇಂದ್ರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಜಾರಿಗೆ ತಂದಿದ್ದ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳ ರದ್ದುಗೊಳಿಸಿ, ಪರ್ಯಾಯ ಜನಪರ ನೀತಿಗಳ ಜಾರಿಗೆ ಆಗ್ರಹಿಸಿ ನಾಳೆ(ನ.26)ಯಿಂದ ಫ್ರೀಡಂ ಪಾರ್ಕ್‍ನಲ್ಲಿ ‘ಸಂಯುಕ್ತ ಹೋರಾಟ ಕರ್ನಾಟಕ’ ನೇತೃತ್ವದಲ್ಲಿ 72 ಗಂಟೆಗಳ ಮಹಾಧರಣಿ-ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ.

ದೇಶದ ಸಂಪತ್ತನ್ನು ರಕ್ಷಿಸಿ, ಜನರ ಬದುಕನ್ನು ಉಳಿಸುವ ಪರ್ಯಾಯ ನೀತಿಗಳಿಗಾಗಿ ಕೇಂದ್ರ ಸರಕಾರವನ್ನು ಆಗ್ರಹಿಸಿ ನ.26ರಿಂದ 28ರ ವರೆಗೆ ದೇಶಾದ್ಯಂತ ಎಲ್ಲ ರಾಜಭವನಗಳ ಮುಂದೆ ಮಹಾಧರಣಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಕರೆ ನೀಡಿದ್ದು, ಅದರ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿಯೂ 72 ಗಂಟೆಗಳ ಮಹಾಧರಣಿ ನಡೆಯಲಿದೆ.

ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ಶಿಫಾರಸ್ಸಿನ ಸೂತ್ರ ಸಿ2+50% ಪ್ರಕಾರ ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು, ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುತ್‍ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳವಾಗಬೇಕು. ರೈತರ ಆತ್ಮಹತ್ಯೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.

ರಾಜ್ಯ ಸರಕಾರ 2020ರಲ್ಲಿ ಜಾರಿಗೊಳಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಅಂತೆಯೇ 2023ರ ಫೆಬ್ರವರಿಯಲ್ಲಿ ಜಾರಿಗೆ ತಂದಿದ್ದ ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12ಗಂಟೆಗೆ ಏರಿಸುವ ತಿದ್ದುಪಡಿಯನ್ನು ರದ್ದುಗೊಳಿಸಬೇಕು.

ರಾಷ್ಟ್ರೀಯ ಕನಿಷ್ಠ ವೇತನ ಮಾಸಿಕ 26ಸಾವಿರ ರೂ ನಿಗದಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಖಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಖಾಯಂಗೆ ಶಾಸನ ರೂಪಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ಎಫ್‍ಟಿಇ ಪದ್ಧತಿಯನ್ನು ರದ್ದುಪಡಿಸಬೇಕು. ಪ್ರತಿಯೊಬ್ಬರಿಗೂ ವಸತಿ ಹಕ್ಕು ಖಾತ್ರಿಪಡಿಸಬೇಕು. ಬಗರ್ ಹುಕುಂ ರೈತರನ್ನು ಒಳಗೊಂಡಂತೆ ಉಳುಮೆ ಮಾಡುತ್ತಿರುವ ಎಲ್ಲ ಸಣ್ಣ ರೈತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಿ, ರೈತ ಸ್ನೇಹಿ ವೈಜ್ಞಾನಿಕ ಪರಿಹಾರ ಕ್ರಮವನ್ನು ಪಾಲಿಸಬೇಕು. ಪ್ರತಿಯೊಬ್ಬರಿಗೂ ವಸತಿ ಹಕ್ಕನ್ನು ಖಾತ್ರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಯಲಿದೆ.

ಕರ್ನಾಟಕ ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ, ಕಿಸಾನ್ ಸಭಾ, ಪ್ರಾಂತ ಕೃಷಿ ಕೂಲಿಕಾರರ ಸಂಘ, ದಲಿತ ಸಂಘಟನೆಗಳ ಒಕ್ಕೂಟ, ಜನಶಕ್ತಿ, ಜನಾಂದೋಲನ ಮಹಾಮೈತ್ರಿ, ಸಿಐಟಿಯು, ಎಐಟಿಯುಸಿ, ಶ್ರಮಿಕ ಶಕ್ತಿ, ಅಂಗನವಾಡಿ, ಬಿಸಿಯೂಟ ನೌಕರರ ಸಂಘವು ಸೇರಿದಂತೆ ವಿವಿಧ ಸಂಘಟನೆಗಳ ಧರಣಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾ ಧರಣಿಗೆ ವೆಲ್ಫೇರ್ ಪಾರ್ಟಿ  ಬೆಂಬಲ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ, ಕಾರ್ಮಿಕ, ಜನವಿರೋಧಿ ಮತ್ತು ಕಾರರ್ಪೊರೆಟ್ ಪರವಾದ ನೀತಿಗಳ ವಿರುದ್ಧ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಜನರ ಮಹಾ ಧರಣಿಗೆ ವೆಲ್ಫೇರ್ ಪಾರ್ಟಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News