ʼಎಸ್‍ಐಆರ್ʼ ರಾಜ್ಯದಲ್ಲಿ ಶೇ.95.58ರಷ್ಟು ಎನ್ಯುಮರೇಷನ್ ಫಾರಂ ವಿತರಣೆ : ಮುಖ್ಯ ಚುನಾವಣಾಧಿಕಾರಿ
ಬೆಂಗಳೂರು : ರಾಜ್ಯದಲ್ಲಿ ಎಸ್‍ಐಆರ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜೂ.30ರಿಂದ ಮತದಾರರ ಮನೆ ಮನೆಗೆ ತೆರಳಿ ಎನ್ಯುಮರೇಷನ್ ಫಾರಂಗಳನ್ನು ಬಿಎಲ್‍ಒಗಳು ತಲುಪಿಸುತ್ತಿದ್ದಾರೆ. ಜು.15ರವರೆಗೆ 5,54,32,314 ಮತದಾರರ ಪೈಕಿ 5,29,82,909 ಮತದಾರರಿಗೆ ಎನ್ಯುಮರೇಷನ್ ಫಾರಂಗಳನ್ನು ತಲುಪಿಸುವ ಮೂಲಕ ಶೇ.95.58ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.
ಬುಧವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2,20.77,772 ಎನ್ಯುಮರೇಷನ್ ಫಾರಂಗಳನ್ನು ಬಿಎಲ್‍ಒಗಳು ಈಗಾಗಲೆ ಡಿಜಿಟಲೀಕರಣ ಮಾಡಿದ್ದಾರೆ. 4,26,233 ಮತದಾರರು ಆನ್‍ಲೈನ್ ಮೂಲಕ ತಮ್ಮ ಎನ್ಯುಮರೇಷನ್ ಫಾರಂಗಳನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಿದರು.
ಇದಲ್ಲದೆ, 13,96,012 ಮಂದಿ ಶಾಶ್ವತವಾಗಿ ಮನೆಗಳನ್ನು ಸ್ಥಳಾಂತರ ಮಾಡಿರುವವರು, ಮೃತಪಟ್ಟವರು, ಲಭ್ಯವಿಲ್ಲದವರು ಹಾಗೂ ಈಗಾಗಲೆ ಬೇರೆ ಕಡೆ ಮತದಾರರಾಗಿ ನೋಂದಣಿ ಮಾಡಿಸಿಕೊಂಡಿರುವವರನ್ನು ಗುರುತಿಸಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದರು.
ಶೇ.100ರಷ್ಟು ಎನ್ಯುಮರೇಷನ್ ಫಾರಂ ವಿತರಣೆಯಾದ ಜಿಲ್ಲೆಗಳು: ಯಾದಗಿರಿ, ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ವಿಜಯನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಶೇ.100ರಷ್ಟು ಹಾಗೂ 11 ಜಿಲ್ಲೆಗಳಲ್ಲಿ ಶೇ.99ರಷ್ಟು ಎನ್ಯುಮರೇಷನ್ ಫಾರಂಗಳನ್ನು ಬಿಎಲ್‍ಒಗಳು ಮತದಾರರ ಮನೆ ಮನೆಗೆ ತಲುಪಿಸಿದ್ದಾರೆ ಎಂದು ಅನ್ಬುಕುಮಾರ್ ಹೇಳಿದರು.
ಡಿಜಿಟಲೀಕರಣ ಮಾಡಿರುವ ಜಿಲ್ಲೆಗಳು: ಚಿಕ್ಕಬಳ್ಳಾಪುರ-ಶೇ.64.72, ಹಾವೇರಿ-ಶೇ.62.48, ದಾವಣಗೆರೆ-ಶೇ.59, ಕೊಪ್ಪಳ-ಶೇ.58.23, ಹಾಸನ-ಶೇ.57, ಚಿತ್ರದುರ್ಗ-ಶೇ.56.47, ಚಾಮರಾಜನಗರ-ಶೇ.55.97, ಬೆಂಗಳೂರು ಗ್ರಾಮಾಂತರ-ಶೇ.54.37, ರಾಯಚೂರು-ಶೇ.54.35, ಚಿಕ್ಕಮಗಳೂರು-ಶೇ.54.30, ಮಂಡ್ಯ-ಶೇ.52.45, ಉತ್ತರ ಕನ್ನಡ-ಶೇ.50.44, ಶಿವಮೊಗ್ಗ-ಶೇ.50.24ರಷ್ಟು ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ 1.03 ಕೋಟಿ ಮತದಾರರ ಪೈಕಿ 82 ಲಕ್ಷ ಮತದಾರರಿಗೆ ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ. ಬೆಂಗಳೂರು ನಗರ-ಶೇ.8.91, ಬಿಬಿಎಂಪಿ ಉತ್ತರ-ಶೇ.6.05, ಬಿಬಿಎಂಪಿ ಕೇಂದ್ರ-ಶೇ.5.06, ಬಿಬಿಎಂಪಿ ದಕ್ಷಿಣ-ಶೇ.5.41ರಷ್ಟು ಡಿಜಿಟಲೀಕರಣ ಆಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ನೀಡುವ ಕುರಿತು ತಿಳಿಸಲಾಗುವುದು ಎಂದು ಅನ್ಬುಕುಮಾರ್ ಹೇಳಿದರು.
ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರು ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಎಸ್‍ಐಆರ್ ಪ್ರಕ್ರಿಯೆ ಪರಿಶೀಲನೆ ನಡೆಸಿದ್ದಾರೆ. ನಾನು ಬೀದರ್, ಯಾದಗಿರಿ, ಕಲಬುರಗಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ನಮೂದಾಗಿರುವ ವಿಳಾಸಕ್ಕೆ ಬಿಎಲ್‍ಒಗಳು ಎನ್ಯುಮರೇಷನ್ ಫಾರಂಗಳನ್ನು ತಲುಪಿಸುತ್ತಾರೆ. ಒಂದು ವೇಳೆ ಮತದಾರರು ಆ ವಿಳಾಸದಲ್ಲಿ ಇಲ್ಲದಿದ್ದರೆ, ಬೇರೆ ಕಡೆ ಸ್ಥಳಾಂತರವಾಗಿದ್ದರೆ, ಅಂತಹವರ ಎನ್ಯುಮರೇಷನ್ ಫಾರಂಗಳನ್ನು ಮತದಾರರ ನೋಂದಣಾಧಿಕಾರಿ(ಇಆರ್‌ಒ) ಸ್ವೀಕೃತ ಮಾಡುವುದು ತಾಂತ್ರಿಕವಾಗಿ ಕಷ್ಟ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಯಾರಾದರೂ ಆ ಮತದಾರನ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೆ ಇಆರ್‌ಒ ಉತ್ತರಿಸುವುದು ಕಷ್ಟವಾಗುತ್ತದೆ. ಆದುದರಿಂದ, ಅಂತಹ ಮತದಾರರು ಆ.5ರ ನಂತರ ಫಾರಂ ಸಂಖ್ಯೆ 6 ಸಲ್ಲಿಸಿ, ಹೊಸದಾಗಿ ಈಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು.
-ವಿ.ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ
ಪ್ರೊಜನಿ ಮ್ಯಾಪಿಂಗ್‍ನಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ ಹೊರತುಪಡಿಸಿ ಬೇರೆಯಾರೊಂದಿಗೂ ಮ್ಯಾಪಿಂಗ್ ಮಾಡಿಸಿಕೊಳ್ಳಲು ಅವಕಾಶವಿಲ್ಲ. ಮತದಾರರಿಗೆ 2002ರ ಎಸ್‍ಐಆರ್ ಮಾಹಿತಿ ಲಭ್ಯವಾಗದಿದ್ದರೂ ಎನ್ಯುಮರೇಷನ್ ಫಾರಂ ಅನ್ನು ಭರ್ತಿ ಮಾಡಿ, ಸಹಿ ಮಾಡಿ, ಹೊಸ ಭಾವಚಿತ್ರ ಅಂಟಿಸಿ ಅದನ್ನು ಬಿಎಲ್‍ಒಗೆ ಜು.29ರೊಳಗಾಗಿ ಹಸ್ತಾಂತರಿಸಿ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಇಆರ್‌ಒ ನೋಟಿಸ್ ಕೊಟ್ಟರೆ, ಚುನಾವಣಾ ಆಯೋಗ ಮಾನ್ಯ ಮಾಡಿರುವ 11 ದಾಖಳೆಗಳ ಪೈಕಿ ಯಾವುದಾದರೂ ದಾಖಲೆಯನ್ನು ಹಾಜರು ಪಡಿಸಿದರೆ, ಇಆರ್‌ಒ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಅನ್ಬುಕುಮಾರ್ ಹೇಳಿದರು.