×
Ad

ಹೊಸದಿಲ್ಲಿ ತಲುಪಿದ ಸಿಎಂ: ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ

Update: 2026-07-15 22:10 IST

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೊಸದಿಲ್ಲಿಗೆ ತಲುಪಿದ್ದು, ಕೇಂದ್ರ ಸಚಿವರೊಂದಿಗೆ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಸಚಿವ ಸಂಪುಟ ವಿಸ್ತರಣೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಸಂಪುಟದಲ್ಲಿನ ಖಾಲಿ ಇರುವ 20 ಸ್ಥಾನಗಳಿಗೆ ಜು.20 ಅಥವಾ ಜು.21ರಂದು ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಪ್ರಮುಖ ನಾಯಕರು ಶೀಘ್ರದಲ್ಲಿಯೇ ವರಿಷ್ಠರನ್ನು ಭೇಟಿ ಮಾಡಲಿದ್ದಾರೆಂದು ಹೇಳಲಾಗಿತ್ತು.

ಆದರೆ, ಇದಕ್ಕೆ ಪುಷ್ಟಿ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರುಗಳು ಬುಧವಾರ ಸಂಜೆಯೇ ಹೊಸದಿಲ್ಲಿಗೆ ತಲುಪಿದ್ದು, ಗುರುವಾರ(ಜು.16) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ಹೊಸದಿಲ್ಲಿ ಪ್ರಯಾಣಕ್ಕೂ ಮೊದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತ ಹೊಸದಾಗಿ ಸಂಪುಟ ಸೇರಲು ಹಲವು ಬಾರಿ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ, ಟಿ.ಬಿ.ಜಯಚಂದ್ರ ಅಪ್ಪಾಜಿ ನಾಡಗೌಡ, ಬಸವರಾಜ ರಾಯರೆಡ್ಡಿ, ಎಚ್.ಸಿ.ಬಾಲಕೃಷ್ಣ, ಹಂಪನಗೌಡ ಬಾದರ್ಲಿ, ಎನ್.ಎ.ಹಾರಿಸ್, ಎಂ.ಕೃಷ್ಣಪ್ಪ, ಎಂ.ವೈ.ಪಾಟೀಲ್, ಪುಟ್ಟರಂಗ ಶೆಟ್ಟಿ, ಬಿ.ಕೆ.ಸಂಗಮೇಶ್ವರ್, ಕೆ.ಎಂ.ಶಿವಲಿಂಗೇಗೌಡ, ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಹಲವಾರು ಮಂದಿ ಲಾಬಿ ನಡೆಸುತ್ತಿದ್ದಾರೆ.

ಇದರ ಜೊತೆಗೆ ರಾಘವೇಂದ್ರ ಹಿಟ್ನಾಳ್, ಟಿ.ರಘುಮೂರ್ತಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಬಿ.ಶಿವಣ್ಣ, ಕೆ.ಷಡಕ್ಷರಿ, ಡಿ.ಜಿ.ಶಾಂತನಗೌಡ, ಯಶವಂತ ರಾಯಗೌಡ ವಿಠಲ ಗೌಡ ಪಾಟೀಲ್, ಪಿ.ಎಂ.ಅಶೋಕ್ ಪಟ್ಟಣ್, ಗಣೇಶ್ ಹುಕ್ಕೇರಿ, ಬೇಳೂರು ಗೋಪಾಲಕೃಷ್ಣ, ಎಸ್.ಎನ್.ನಾರಾಯಣಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಕೆ.ವೈ.ನಂಜೇಗೌಡ, ಅಜಯ್ ಧರ್ಮಸಿಂಗ್, ಶರತ್ ಬಚ್ಚೇಗೌಡ, ಶ್ರೀನಿವಾಸ ಮಾನೆ, ಕಂಪ್ಲಿ ಗಣೇಶ್, ಟಿ.ಡಿ.ರಾಜೇಗೌಡ, ಎ.ಎಸ್.ಪೊನ್ನಣ್ಣ ಸೇರಿದಂತೆ ಹಲವಾರು ಮಂದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಆ ಪೈಕಿ ಬಹಳಷ್ಟು ಮಂದಿ ಒಂದು ಬಾರಿಯೂ ಸಚಿವರಾಗದೇ ಅವಕಾಶಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಹಲವು ಮಂದಿ ಹಿರಿಯ ಶಾಸಕರು, ಮರಳಿ ಅವಕಾಶ ಗಿಟ್ಟಿಸಲು ಪ್ರಯಸತ್ನಿಸುತ್ತಿದ್ದು, ಜಾತಿ, ಪ್ರಾದೇಶಿಕವಾರು ಆದ್ಯತೆ ಮೇರೆಗೆ ಸಚಿವ ಸ್ಥಾನಕ್ಕಾಗಿ ಎದುರು ನೋಡುತ್ತಿದ್ದಾರೆ.

 

ಸಂಪುಟ ಸಭೆ ಮುಂದೂಡಿಕೆ: ವಿಧಾನಸೌಧದಲ್ಲಿ ಗುರುವಾರ(ಜು.16) ಬೆಳಗ್ಗೆ 11 ಗಂಟೆಗೆ ಆಯೋಜನೆಗೊಂಡಿದ್ದ ಮಹತ್ವದ ಸಂಪುಟ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಈ ಸಂಬಂಧ ಸರ್ಕಾರದ ಅಪರ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಮುಂದಿನ ಸೂಕ್ತ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News