×
Ad

ಬಿಡದಿ ಟೌನ್‌ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ.ಕೆ.ಶಿವಕುಮಾರ್ ಅಭಯ

"ಸ್ವಇಚ್ಛೆಯಿಂದ ಭೂಮಿ ನೀಡುವವರಿಗೆ ಪರಿಹಾರ; ರೈತರ ಅಹವಾಲು, ಅಭಿಪ್ರಾಯ ಕೇಳಲು ಸಮಿತಿ ರಚನೆ"

Update: 2026-07-15 17:56 IST

ಬೆಂಗಳೂರು : “ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸರಕಾರವು ಯಾವುದೇ ರೈತರಿಂದ ಬಲವಂತವಾಗಿ ಜಮೀನು ಪಡೆಯುವುದಿಲ್ಲ. ಸ್ವಇಚ್ಛೆಯಿಂದ ಮುಂದೆ ಬಂದು ಭೂಮಿ ಕೊಟ್ಟವರಿಗೆ ಪರಿಹಾರ ನೀಡುತ್ತೇವೆ. ಈ ವಿಚಾರದಲ್ಲಿ ರೈತರ ಅಹವಾಲು, ಅಭಿಪ್ರಾಯ ಪಡೆಯಲು ಸಮಿತಿ ರಚಿಸಲಾಗುವುದು” ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಶಿವಕುಮಾರ್ ಅವರು ಮಾತನಾಡಿದರು.

ಯಾವ ಪ್ರತಿಭಟನೆ ಅಗತ್ಯವಿಲ್ಲ, ನಿಮ್ಮ ಜಮೀನಿನಲ್ಲಿ ನೆಮ್ಮದಿಯಾಗಿರಿ:

“ಯಾರ ಆಸ್ತಿಯನ್ನು ನಾವು ಬಲವಂತವಾಗಿ ಪಡೆಯುವುದಿಲ್ಲ. ಜಮೀನು ನೀಡಲು ಇಷ್ಟವಿಲ್ಲದವರು ನೆಮ್ಮದಿಯಾಗಿ ತಮ್ಮ ಜಮೀನಿನಲ್ಲಿ ಇರಬಹುದು. ಯಾವ ಧರಣಿ, ಪ್ರತಿಭಟನೆ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳಾಗಿದ್ದಾಗ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರು ಮಾರ್ಗದರ್ಶನದಂತೆ ಯೋಜನೆ ಪ್ರಕ್ರಿಯೆ ಮುಂದುವರಿದಿದೆ. ನಾನು ಯಾರಿಗೂ ಬಲವಂತ ಮಾಡುವುದಿಲ್ಲ. ಅವರು ಹೊರಡಿಸಿರುವ ರೆಡ್ ಜೋನ್ ಆದೇಶ ಮುಂದುವರಿಯುತ್ತದೆ. ಭೂಮಿ ನೀಡಲು ಇಷ್ಟವಿಲ್ಲದವರಿಗೆ ನಾನು ಬಲವಂತ ಮಾಡುವುದಿಲ್ಲ. ನಾನು ರೈತರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಇಷ್ಟವಿಲ್ಲದವರು ಅವರ ಭೂಮಿ ಅವರೇ ಇಟ್ಟುಕೊಳ್ಳಲಿ. ಕುಮಾರಸ್ವಾಮಿ ಅವರು ಪ್ರತಿ ಎಕರೆಗೆ 8 ಸಾವಿರ ಅಡಿ ಅಭಿವೃದ್ಧಿಪಡಿಸಿದ ಭೂಮಿ ನೀಡಲು ಮುಂದಾಗಿದ್ದರು. ನಾವು 50% ಅಂದರೆ 9500 ಅಡಿ ಭೂಮಿ ನೀಡಲು ತೀರ್ಮಾನಿಸಿದೆವು. ಸ್ವಯಂ ಇಚ್ಛೆಯಿಂದ ಬರುವವರಿಗೆ ಪರಿಹಾರ ನೀಡಿ ಭೂಮಿ ಪಡೆಯುತ್ತೇವೆ” ಎಂದು ಸ್ಪಷ್ಟಪಡಿಸಿದರು.

“ರೈತರು ಹೋರಾಟ ಧರಣಿ ಬಿಟ್ಟು ನಿಮ್ಮ ಬದುಕು ಕಟ್ಟಿಕೊಳ್ಳಿ. ರಾಜಕೀಯಕ್ಕಾಗಿ ಇವರು ನಿಮ್ಮನ್ನು ಬಲಿ ಕೊಡುತ್ತಿದ್ದಾರೆ. ನೀವು ಬಲಿಯಾಗಬೇಡಿ. ಸಮಿತಿಯವರು ನಿಮ್ಮ ಬಳಿಗೆ ಬಂದಾಗ, ಸಮಿತಿ ಮುಂದೆ ನಿಮ್ಮ ಅಭಿಪ್ರಾಯ ಹೇಳಿಕೊಳ್ಳಿ. ಹೊಡೆಯುವುದಾದರೆ ಬಂದು ನನಗೆ ಹೊಡೆಯಿರಿ” ಎಂದರು.

ನನ್ನನ್ನು ಜೈಲಿಗೆ ಕಳುಹಿಸುವ ಅವರ ಪ್ರಯತ್ನ ಮುಂದುವರಿಯಲಿ, ನಾನು ಸಿದ್ಧನಿದ್ದೇನೆ

“ನಿಮಗೆ ಆಸೆ ಇದ್ದರೆ ನಿಮ್ಮ ಪ್ರಯೋಗಗಳು ನನ್ನ ಮೇಲೆ ಆಗಲಿ. ಈಗಾಗಲೇ ನನ್ನ ಮೇಲೆ ಕೇಸು, ಕೌಂಟರ್ ಕೇಸು ಪ್ರಯೋಗಗಳು ನಡೆಯುತ್ತಿವೆ. ಜೈಲಿಗೆ ಹೋಗುವ ದಿನ ಹತ್ತಿರ ಬಂದಿದೆ ಎಂದು ಕುಮಾರಣ್ಣ ಹೇಳಿದ್ದಾರೆ. ನಾನು ಸಿದ್ಧನಿದ್ದೇನೆ ಕುಮಾರಣ್ಣ. ನಿನ್ನ ಆಶೀರ್ವಾದ. ನಾನು ಕೃಷ್ಣನ ಜನ್ಮ ಸ್ಥಳದಲ್ಲಿ ಇದ್ದವನು. ನೀನು ಬಂದು ಭೇಟಿ ಮಾಡಿದ್ದೆ. ನಿಮ್ಮ ಪ್ರಯತ್ನ ಹೋರಾಟ, ನಿಮ್ಮ ಶ್ರಮ ಎಲ್ಲವೂ ನನಗೆ ಗೊತ್ತಿದೆ. ಬೇರೆ ಯಾವ ನಾಯಕರು ಬೆಳೆಯಬಾರದು ಎಂಬ ನಿಮ್ಮ ಮನಸ್ಥಿತಿ ನನಗೆ ಅರಿವಿದೆ. ಆದರೂ ನಿಮ್ಮ ಹಿರಿತನಕ್ಕೆ ನಮಸ್ಕರಿಸುವುದು ನನ್ನ ಧರ್ಮ. ನಾನು ಕೊಡುವ ಗೌರವ ನಿಮ್ಮಿಂದ ಸ್ವೀಕರಿಸಲು ಆಗದಿದ್ದರೆ ಅದು ನಿಮ್ಮ ಪಾಡು. ನಾನು ಯಾರಿಗೂ ಕೆಟ್ಟದ್ದು ಬಯಸುವವನಲ್ಲ, ನಿಮಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನನ್ನನ್ನು ಜೈಲಿಗೆ ಕಳಿಸಬೇಕು ಎಂಬ ಸಂಕಲ್ಪ ಮಾಡಿದ್ದಿರೋ ಅದನ್ನು ಮುಂದುವರಿಸಿ. ಆ ಜೈಲಿಗೆ ಹೋಗಿ ಬಂದೇ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಕೂತಿದ್ದೇನೆ. ನಾನು ಜೈಲಿಗೆ ಹೋದಾಗ ಜನ ಹೇಗೆ ನನ್ನ ಪರವಾಗಿ ನಿಂತರು ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾನು ಜೈಲಿಗೆ ಹೋಗಿದ್ದ ಕೇಸ್ ಎರಡೂವರೆ ವರ್ಷಗಳಲ್ಲಿ ವಜಾವಾಗಿದೆ. ಸುಪ್ರೀಂ ಕೋರ್ಟ್ ಪಾದಕ್ಕೆ ನಾನು ಇಲ್ಲಿಂದಲೇ ನಮಿಸುತ್ತೇನೆ. ಆ ಜೈಲಿನ ಕೋಣೆಯಲ್ಲಿ ನಾನು ನನ್ನ ಕುಟುಂಬ ಅನುಭವಿಸಿದ ನೋವು ನಮಗೆ ಮಾತ್ರ ಗೊತ್ತು. ನನಗಾಗಿ ರಾಜ್ಯದ ನನ್ನ ತಾಯಂದಿರು, ಯುವಕರು ಕಣ್ಣೀರು ಹಾಕಿ, ಪ್ರಾರ್ಥಿಸಿ ನನ್ನನ್ನು ಜೈಲಿಂದ ಹೊರಗೆ ಕರೆತಂದು ಈ ಸ್ಥಾನದಲ್ಲಿ ಕೂರಿಸಿದ್ದಾರೆ” ಎಂದರು.

ಡಿಎಲ್ಎಫ್ ಗೆ ಟೆಂಡರ್ ನೀಡಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ಯಾರು?

“ಕುಮಾರಸ್ವಾಮಿ ಅವರು ಮಾಡಲು ಮುಂದಾಗಿದ್ದ ಟೌನ್ ಶಿಪ್ ನಲ್ಲಿ ಇಡಿ ಹಳ್ಳಿಗಳು, ಅಲ್ಲಿ ಬದುಕು ಕಟ್ಟಿಕೊಂಡಿದ್ದವರ ಮನೆಗಳನ್ನು ಸೇರಿ ಎಲ್ಲರನ್ನು ಒಕ್ಕಲೆಬ್ಬಿಸಲು ಆದೇಶ ಹೊರಡಿಸಿದ್ದರು. ಅವರದೇ ಆದ ಪರಿಹಾರ ಮಾರ್ಗಸೂಚಿ ಹೊರಡಿಸಿದ್ದರು. ನಮ್ಮಣ್ಣ ಮಾತೆತ್ತಿದರೆ ಬಿಡದಿ ಟೌನ್ ಶಿಪ್ ಅನ್ನು ರಿಯಲ್ ಎಸ್ಟೇಟ್ ಎಂದು ಹೇಳುತ್ತಾರೆ. ಅವರು ಈ ಟೌನ್ ಶಿಪ್ ನಿರ್ಮಾಣವನ್ನು ರಿಯಲ್ ಎಸ್ಟೇಟ್ ಕಂಪನಿ ಡಿಎಲ್ಎಫ್ ಗೆ ಜವಾಬ್ದಾರಿ ನೀಡಿ ಅವರಿಂದ 400 ಕೋಟಿ ರೂ. ಹಣ ಕೂಡ ಕಟ್ಟಿಸಿಕೊಂಡಿದ್ದರು. ಕುಮಾರಸ್ವಾಮಿ ಅವರು ಅನಾರೋಗ್ಯದದಲ್ಲಿದ್ದರೂ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ರೈತರಿಗೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ 40% ಜಮೀನನ್ನು (ಪ್ರತಿ ಎಕರೆಗೆ ಸುಮಾರು 8 ಸಾವಿರ ಅಡಿ) ಪರಿಹಾರವಾಗಿ ನೀಡುವುದಾಗಿ ಹೇಳಿದ್ದಾರೆ. ಆಗ ಪ್ರತಿ ಎಕರೆಗೆ 22-25 ಲಕ್ಷ ಪರಿಹಾರ ನಿಗದಿ ಪಡಿಸಿದರು. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಿದ್ದರು” ಎಂದು ವಿವರಿಸಿದರು.

ಸಮಿತಿ ರಚನೆಯಾಗಿ ವರದಿ ಬರುವವರೆಗೂ ಪ್ರಕ್ರಿಯೆ ನಿಲ್ಲುತ್ತದೆಯೇ ಎಂದು ಕೇಳಿದಾಗ, “ಯಾರು ರೆಡ್ ಜೋನ್ ನಿಂದ ಮುಕ್ತಿ ಪಡೆಯಲು ಸ್ವಇಚ್ಛೆಯಿಂದ ಮುಂದೆ ಬಂದು ಭೂಮಿ ನೀಡುತ್ತಾರೋ ಅವರಿಗೆ ಪರಿಹಾರ ನೀಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಯಾರು ಬೇಡ ಎನ್ನುತ್ತಾರೋ ಅವರಿಗೆ ಬಲವಂತ ಮಾಡುವುದಿಲ್ಲ. ಈ ಪ್ರಕ್ರಿಯೆ ಮುಂದುವರಿಯುತ್ತದೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News