ದ್ವೇಷ ಭಾಷಣ ವಿರುದ್ಧ ಹೊಸ ಕಾನೂನು ಜಾರಿಗೆ ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು, ಆ.14: ಭಾಷಣ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ದ್ವೇಷ ಭಾಷಣವನ್ನು ಮಾಡುವುದರಿಂದ ಸಮಾಜದಲ್ಲಿ ಅಶಾಂತಿ ನಲೆಸುತ್ತದೆ. ಹೀಗಾಗಿ ದ್ವೇಷ ಭಾಷಣ ಮಾಡುವವರ ವಿರುದ್ಧ ಹೊಸ ಕಾನೂನು ಜಾರಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವ್ಯಕ್ತಿ, ಸಂಸ್ಥೆಯನ್ನಾಗಲೀ ಪ್ರಚೋಧನೆ ಮಾಡುವ ರೀತಿಯಲ್ಲಿ ಭಾಷಣ ಮಾಡುವುದು ಸರಿಯಲ್ಲ. ಇದರಿಂದ ಮುಂದಿನ ಪರಿಣಾಮಗಳು ಹೆಚ್ಚಾಗಲಿವೆ ಎನ್ನುವ ಕಾರಣಕ್ಕೆ, ದ್ವೇಷ ಭಾಷಣವನ್ನು ತಡೆಯಬಹುದಾಗಿದೆ ಎಂದರು.
ಅನಗತ್ಯವಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಪೋಸ್ಟ್ ಗಳು ಹಿಂಸಾಚಾರಕ್ಕೆ ಕಾರಣವಾಗಿವೆ. ಆದುದರಿಂದ ಮುಂದಿನ ದಿನಗಳಲ್ಲಿ ಕೋಮುಭಾವನೆಗೆ ಧಕ್ಕೆ ತರುವ ಹಾಗೂ ಪ್ರಚೋದನೆ ನೀಡುವ ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನನ್ನು ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.