×
Ad

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ | ಮಂಗಳವಾರದಂದು 20ಕ್ಕೂ ಅಧಿಕ ಯುದ್ದ ವಿಮಾನ ಹಾರಾಟ

Update: 2025-02-11 22:28 IST

ಬೆಂಗಳೂರು: ನಗರದ ಹೊರ ವಲಯದಲ್ಲಿರುವ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನವು ನಾಳೆ ಮೂರನೆ ದಿನಕ್ಕೆ ಕಾಲಿಡಲಿದೆ. ಮಂಗಳವಾರದಂದು 20ಕ್ಕೂ ಅಧಿಕ ಯುದ್ದ ವಿಮಾನಗಳು ಬಾನಂಗಳದಲ್ಲಿ ಹಾರಾಟ ನಡೆಸಿದವು.

ಮಧ್ಯಾಹ್ನ 12 ಗಂಟೆಗೆ ಆರಂಭವಾದ ಯುದ್ದ ವಿಮಾನಗಳ ಹಾರಾಟ ಸತತವಾಗಿ ಮೂರು ಗಂಟೆಗಳ ಕಾಲ ನಡೆಯಿತು. ರಫೇಲ್, ಸುಖೋಯ್, ಎಫ್-35, ಕೆಸಿ 135, ಎಲ್‍ಯುಎಚ್, ಐಜೆಟಿ ಇತ್ಯಾದಿ ಅತ್ಯಾಧುನಿಕ ಫೈಟರ್ ಜೆಟ್, ಟ್ರೈನರ್ ಜೆಟ್, ಫೈಟರ್ ಹೆಲಿಕಾಪ್ಟರ್‌ ಗಳು ಪ್ರದರ್ಶನ ನಡೆಸಿದವು.

ಆರಂಭದಲ್ಲಿ ಭಾರತದ ಹಿಂದೂಸ್ಥಾನ್ ಟರ್ಬೋ ಟ್ರೈನರ್-40(ಎಚ್‍ಟಿಟಿ-40) ಆಗಸಕ್ಕೆ ಹಾರಿ ತನ್ನ ಸಾಮಾರ್ಥ್ಯ ವನ್ನು ಪ್ರದರ್ಶಿಸಿತು. 2013ರಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್) ಎಚ್‍ಟಿಟಿ-40 ಅಭಿವೃದ್ಧಿ ನಪಡಿಸಿದ್ದು, ದೇಶದಲ್ಲೇ ನಿರ್ಮಾನಗೊಂಡ ಮೊದಲ ಟ್ರೈನರ್ ಯುದ್ಧ ವಿಮಾನವಾಗಿದೆ. ಸುಮಾರು 10 ನಿಮಿಷಗಳ ಕಾಲ ಇದು ಆಕಾಶದಲ್ಲಿ ಹಾರಾಟ ನಡೆಸಿತು.

ಎಲ್‍ಸಿಎ ತೇಜಸ್ ಎಂಕೆಏಐ(ಆಲ್ಪಾ) ಆಕಾಶದಲ್ಲಿ ಶಕ್ತಿ ಪ್ರದರ್ಶನ ತೋರಿದ್ದು, ಮಂಗಳವಾರಂದು ಕೆ.ಕೆ. ವೇಣುಗೋಪಾಲ್ ಯುದ್ದ ವಿಮಾನಕ್ಕೆ ಪೈಲಟ್ ಆಗಿದ್ದರು. ಇದನ್ನು ಎಚ್‍ಎಎಲ್‍ನಲ್ಲಿ ಅಭಿವೃದ್ಧಿ ಮಾಡಲಾಗಿದೆ. ಆಕಾದಲ್ಲಿ ಏಕ ಕಾಲಕ್ಕೆ ಎರಡು-ಮೂರು ಬಾರಿ ಪಲ್ಟಿ ಹಾಕುವ ಮೂಲಕ ನೋಡುಗರನ್ನು ವಿಮಾನ ಆಕರ್ಷಿಸಿತು.

ಎಲ್‍ಯುಎಚ್(ಲೈಟ್ ಯುಟಿಲಿಟಿ ಹೆಲಿಕಾಪ್ಟರ್) ಆಕಾಶದಲ್ಲಿ ಹಾರಾಟ ನಡೆಸಿದ್ದು, ಇದನ್ನು ಎಚ್‍ಎಎಲ್ ಅಭಿವೃದ್ಧಿಪಡಿಸಿದೆ. ಆಕಾಶದಲ್ಲಿಯೇ 360 ಡಿಗ್ರಿ ಆಕಾರದಲ್ಲಿ ಸುತ್ತುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ಏಕ ಇಂಜಿನ್ ಅನ್ನು ಹೊಂದಿದೆ.

ಕೆಸಿ ಸ್ಟ್ರಾಟೋಟ್ಯಾಂಕರ್ ಪ್ರದರ್ಶನವು ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ನಾಲ್ಕು ಟರ್ಬೋ ಪ್ಯಾನ್‍ಗಳನ್ನು ಹೊಂದಿದ್ದ ಇದು ಆಗಸಲದಲ್ಲಿ ಎಡದಿಂದ ಬಲಕ್ಕೆ ಸಂಚರಿಸಿ ವೀಕ್ಷಕರನ್ನು ಸೆಳೆಯಿತು. ಇದನ್ನು ಅಮೆರಿಕಾ ಅಬಿವೃದ್ಧಿಪಡಿಸಿದೆ.

ಸುಕೋಯ್ 30 ಎಂಕೆಐ ಯುದ್ದ ವಿಮಾನವು ಏರೋ ಇಂಡಿಯಾದಲ್ಲಿ ಪ್ರದರ್ಶನಗೊಂಡಿದೆ. ಇದನ್ನು ರಷ್ಯಾ ಅಭಿವೃದ್ದಿಪಡಿಸಿದೆ. ಇದು ತಕ್ಷಣವೇ ತನ್ನ ದಿಕ್ಕನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 10 ನಿಮಿಷಗಳ ಕಾಲ ಇದು ಆಕಾಶದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿತು.

ಹಂಸ ಎನ್‍ಜಿ ಯುದ್ದ ವಿಮಾನವು ಆಕಾಶದಲ್ಲಿ ಹಾರಾಟ ನಡೆಸಿತು. ಇದು ಬಿಳಿ ಬಣ್ಣವನ್ನು ಹೊಂದಿದ್ದು, ನೋಸ್ ವೀಲ್ ಅನ್ನು ಹೊಂದಿದೆ. ಇದನ್ನು ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿ ರಿಸರ್ಚ್ ವಿನ್ಯಾಸಗೊಳಿಸಿದ್ದು, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ತಯಾರಿಸಿದೆ.

ಸೂರ್ಯಕಿರಣ್ ಯುದ್ದ ವಿಮಾನಗಳ ಹಾರಾಟವು ವೀಕ್ಷಕರನ್ನು ರೋಮಾಂಚನಗೊಳಿಸಿತು. ಪ್ರತಿ ಬಾರಿಯಂತೆ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದಿಂದ ಅದ್ಭುತ ವೈಮಾನಿಕ ಪ್ರದರ್ಶನ ನಡೆಯಿತು. ಏಕಕಾಲದಲ್ಲಿ ಒಂಭತ್ತು ಯುದ್ದ ವಿಮಾನಗಳು ಆಕಾಶಕ್ಕೆ ಹಾರಿ ಶಕ್ತಿಯನ್ನು ಪ್ರದರ್ಶಿಸಿದವು. ಎಡದಿಂದ ಬಲಕ್ಕೆ, ಬಲದಿಂದ ಎಡ ಯುದ್ದ ವಿಮಾನಗಳು ಗುಂಪಾಗಿ ಹಾರಾಟ ನಡೆಸಿದವು.

ರಷ್ಯಾದ ಎಸ್‍ಯು-57 ಮತ್ತು ಅಮೆರಿಕಾದ ಎಫ್-35 ಆಕಾಶದಲ್ಲಿ ಹಾರಾಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ಇವೆರೆಡು ಐದನೆ ತಲೆಮಾರಿನ ಯುದ್ದ ವಿಮಾನಗಳಾಗಿದ್ದು, ವಿಶ್ವದ ಅತ್ಯಂತ ಪ್ರಬಲ ಫೈಟರ್‌ ಗಳೆಂದು ಹೆಸರು ಗಳಿಸಿವೆ.

ಇನ್ನು ಐಜೆಟಿ, ಸುಖೋಯ್ 30 ಎಂಕೆಐ, ಹನ್ಸಾ, ಎಫ್35, ಹಾಕ್ ಇತ್ಯಾದಿ ವಿಮಾನಗಳು ಸೇರಿ ಫ್ರಾನ್ಸ್‌ ನ ರಫೇಲ್, ರಷ್ಯಾದ ಸುಖೋಯ್, ಅಮೆರಿಕದ ಎಫ್-35 ಸ್ಟೀಲ್ತ್ ಫೈಟರ್‌ಗಳು ಸೇರಿದಂತೆ ಹಲವು ಪ್ರಮುಖ ಯುದ್ಧ ವಿಮಾನಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ.

ಕಾರ್ಗೋ ವಿಮಾನಗಳು ಫೈಟರ್ ಜೆಟ್‍ಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ಈ ಬಾರಿ ಏರ್ ಶೋನಲ್ಲಿ ಸಿ-390 ಮಿಲಿನಿಯಂ ಹೆಸರಿನ ಭಾರೀ ಗಾತ್ರದ ಬ್ರೆಜಿಲ್ ಮೂಲದ ಕಾರ್ಗೋ ವಿಮಾನ ಸೆಳೆಯುತ್ತಿದೆ.

ಎರಡನೇ ದಿನದ ಏರ್ ಶೋನಲ್ಲಿ ಸ್ವೀಡನ್ ದೇಶದ ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದನ್ನು ಸಾಬ್ ಕಂಪನಿಯಿಂದ ನಿರ್ಮಿಸಿದೆ. ಈ ಫೈಟರ್ ಏರ್ ಕ್ರಾಫ್ಟನ್ನು ಭಾರತಕ್ಕೆ ಪರಿಚಯಿಸುವ ಕುರಿತು ಉಭಯ ರಾಷ್ಟ್ರಗಳ ಜೊತೆ ಮಾತುಕತೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News