ಟೆಂಡರ್ ಕೊಡಿಸುವುದಾಗಿ ಹೇಳಿ ವಂಚನೆ ಆರೋಪ: ಮಾಜಿ ಸಚಿವ ಹಾಲಪ್ಪ ಆಚಾರ್ ಗನ್‍ಮ್ಯಾನ್ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಆ.2: ಟೆಂಡರ್ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿರುವ ಆರೋಪದಡಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗನ್‍ಮ್ಯಾನ್ ರಾಘವೇಂದ್ರ ಎಂಬುವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ದಾವಣಗೆರೆಯ ಜಿಲ್ಲೆಯವರಾದ ಎಚ್.ರಾಜುನಾಯ್ಕ್ ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. 2021-22ರಲ್ಲಿ ಎಚ್.ರಾಜಾನಾಯ್ಕ್ ಅವರು, ಮಾಯಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀರಾಮನಗರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಅಂಗನವಾಡಿ ಕಟ್ಟಡದ ಟೆಂಡರ್ ಅನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಆಗ ಮಹಿಳಾ ಮತ್ತು ಮಕ್ಕಳ ಸಚಿವರಾಗಿದ್ದ ಹಾಲಪ್ಪ ಆಚಾರ್ ಅವರನ್ನು ಭೇಟಿ ಮಾಡಲು ಅವರು ವಿಧಾನಸೌಧಕ್ಕೆ ಬಂದಿದ್ದರು. ಆಗ ಅವರಿಗೆ, ಗನ್ ಮ್ಯಾನ್ ರಾಘವೇಂದ್ರ ಪರಿಚಯವಾಗಿದ್ದರು.
ಇವರ ವಿಚಾರವನ್ನು ಕೇಳಿದ ರಾಘವೇಂದ್ರ, ತಾವು 30 ಕೋಟಿ ರೂ. ವೆಚ್ಚದ ಟೆಂಡರ್ ಕೊಡಿಸುವುದಾಗಿ ಹೇಳಿದರಲ್ಲದೆ, ಅದಕ್ಕೆ ಪ್ರತಿಯಾಗಿ ಶೇ.12ರಷ್ಟು ಹಣವನ್ನು ತಮಗೆ ಕಮಿಷನ್ ರೂಪದಲ್ಲಿ ನೀಡಬೇಕೆಂದು ಕೋರಿದ್ದರು. ಅದಕ್ಕೆ ಎಚ್.ರಾಜಾ ನಾಯ್ಕ್ ಒಪ್ಪಿಕೊಂಡಿದ್ದರೆನ್ನಲಾಗಿದೆ. ನಂತರ, ಕಮಿಷನ್ ರೂಪದಲ್ಲಿ ತಮಗೆ 10 ಲಕ್ಷ ರೂ. ಮುಂಗಡ ಹಣ ನೀಡಬೇಕೆಂದು ರಾಘವೇಂದ್ರ ಬೇಡಿಕೆಯಿಟ್ಟಿದ್ದರು.
ಅವರ ಮಾತನ್ನು ನಂಬಿದ್ದ ಎಚ್.ರಾಜಾನಾಯ್ಕ್, 10ಲಕ್ಷ ರೂ.ಗಳನ್ನು ರಾಘವೇಂದ್ರ ಅವರಿಗೆ ನೀಡಿದ್ದರು. ಆದರೆ, ದಿನಗಳು ಕಳೆದರೂ ಟೆಂಡರ್ ವಿಚಾರದಲ್ಲಿ ಯಾವುದೇ ಪ್ರಗತಿಯಾಗಲಿಲ್ಲ. ಆಗ ಕೊಟ್ಟ ಹಣ ಹಿಂದಕ್ಕೆ ಕೊಡುವಂತೆ ಎಚ್.ರಾಜಾನಾಯ್ಕ್ ಅವರು ಕೇಳಿದಾಗ, 4 ಲಕ್ಷ ರೂ.ಗಳನ್ನು ಹಿಂದಕ್ಕೆ ನೀಡಿದ್ದ ರಾಘವೇಂದ್ರ, ಉಳಿದ 6 ಲಕ್ಷ ರೂ.ಗಳನ್ನು ನೀಡಿದೆ ವಂಚಿಸಿದ್ದರು. ಈ ಸಂಬಂಧ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.