ಶೃಂಗೇರಿ ಅಂಚೆ ಮತ ತಿದ್ದಿರುವ ಆರೋಪ: ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಟಿ.ಡಿ.ರಾಜೇಗೌಡ ದೂರು
ಬೆಂಗಳೂರು, ಮೇ 7 : ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ಮತಪತ್ರ ತಿದ್ದಿರುವುದಾಗಿ ಆರೋಪಿಸಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ಗುರುವಾರ ನಗರದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ಮಾಡಿ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆ ಮತ ಎಣಿಕೆಯ ವೇಳೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಪಕ್ಷೇತರರ ಅಭ್ಯರ್ಥಿಗಳ ಕೌಂಟಿಂಗ್ ಏಜೆಂಟ್ ಇದ್ದರು. ಪಾರದರ್ಶಕವಾಗಿ ಮತ ಎಣಿಕೆ ಆಗಿತ್ತು. ಮತ ಎಣಿಕೆ ಬಳಿಕ ರಾಜೇಗೌಡ ಗೆದ್ದರು ಎಂದು ಘೋಷಣೆ ಮಾಡಿದ್ದರು. ಮಾನ್ಯ ಯಾವುದು, ಅಮಾನ್ಯ ಯಾವುದು ಎಂದು ಎಲ್ಲರಿಗೂ ತೋರಿಸಿದ್ದರು. ಅನಂತರ ನನ್ನ ವಿರುದ್ಧ ಚುನಾವಣಾ ಅರ್ಜಿ ಹಾಕಿ, ಅನೇಕ ಆರೋಪ ಮಾಡಿದರು. ಈ ಹಿನ್ನೆಲೆ ಮರು ಎಣಿಕೆಗೆ ಹೈಕೋರ್ಟ್ ಆದೇಶಿಸಿತ್ತು ಎಂದು ವಿವರಿಸಿದರು.
ಹೈಕೋರ್ಟ್ 279 ಅಮಾನ್ಯ ಮತಗಳನ್ನು ಮರು ಎಣಿಕೆ ಮಾಡಲು ಹೇಳಿತು. ಮರು ಎಣಿಕೆ ವೇಳೆ ಬಂಡಲ್ ಬಂಡಲ್ ಮತಗಳು ಅಮಾನ್ಯವಾಗಿದೆ. ವೋಟ್ ಟ್ಯಾಂಪರಿಂಗ್ ಆಗಿದೆ ಎನ್ನುವುದು ನಮ್ಮ ಅನುಮಾನ. ನ್ಯಾಯಯುತ ತನಿಖೆ ಆಗಲಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಯಾವ ಪಕ್ಷದವರಿಗೂ ಈ ರೀತಿಯ ಅನ್ಯಾಯ ಆಗಬಾರದು. ಚುನಾವಣಾ ಆಯೋಗದ ಮೇಲೆ ನಂಬಿಕೆ ಇದೆ ಎಂದು ಟಿ.ಡಿ.ರಾಜೇಗೌಡ ಹೇಳಿದರು.
ಹೈಕೋರ್ಟ್ ಆದೇಶದ ಮೇಲೆ ಅಪೀಲ್ ಹೋಗಬಹುದಿತ್ತು. ಆದರೆ, ನಮಗೆ ಹೀಗಾಗಿದೆ ಎಂದು ಗೊತ್ತಿಲ್ಲ. ಮರುಎಣಿಕೆ ಮೇಲೆ ನಮಗೆ ನಂಬಿಕೆ ಇತ್ತು. ನಮಗೆ ಬಿದ್ದ ಮಾನ್ಯ ಮತಗಳನ್ನು ಅಮಾನ್ಯ ಮಾಡುತ್ತಾರೆ ಎಂದು ಅನ್ನಿಸಿರಲಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ಮಾಡಬೇಕು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕೆಲವು ವ್ಯಕ್ತಿಗಳು ಈ ರೀತಿಯ ಕೃತ್ಯ ಮಾಡಿದ್ದಾರೆ. ಕೆಲವು ಅಧಿಕಾರಿಗಳು, ಕೆಲ ಪಕ್ಷದವರು ಇರಬಹುದು ಎನ್ನುವ ಅನುಮಾನ ಇದೆ. ತನಿಖೆ ನಡೆದರೆ ಸತ್ಯಾ ಸತ್ಯತೆ ಹೊರಬರುತ್ತದೆ ಎಂದು ಟಿ.ಡಿ.ರಾಜೇಗೌಡ ಹೇಳಿದರು.
ಒಂದು, ಎರಡು ಮತದಿಂದ ಗೆದ್ದವರ ಪರಿಸ್ಥಿತಿ ಏನು? ತನಿಖೆ ಆಗಬೇಕು, ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನ್ಯಾಯಾಲಯದಲ್ಲೂ ಮನವಿ ಮಾಡುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಟಿ.ಡಿ.ರಾಜೇಗೌಡ ಒತ್ತಾಯಿಸಿದರು.