ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಸ್ವಪಕ್ಷದ ವಿಧಾನ ಪರಿಷತ್ ಸದಸ್ಯ ಅಪಸ್ವರ
ಪೋಕ್ಸೋ ಪ್ರಕರಣ ಎದುರಿಸುತ್ತಿರುವ ನಾಯಕನಿಗೆ ಅಭಿಮಾನೋತ್ಸವ ದುರಂತ : ಎಚ್.ವಿಶ್ವನಾಥ್ ವಾಗ್ದಾಳಿ
ಬಿ.ಎಸ್.ಯಡಿಯೂರಪ್ಪ/ಎಚ್.ವಿಶ್ವನಾಥ್
ಮೈಸೂರು : ʼಪೋಕ್ಸೋ ಪ್ರಕರಣ ಎದುರಿಸುತ್ತಿರುವ ನಾಯಕನಿಗೆ ಅಭಿಮಾನೋತ್ಸವ ಮಾಡುತ್ತಿರುವುದು ದುರಂತ. ಈ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್ ಶಾ ಅವರೇ ಬರುತ್ತಿದ್ದಾರೆ ಎಂದರೆ ನಾವು ಯಾರ ಬಳಿ ನ್ಯಾಯ ಕೇಳಬೇಕುʼ ಎಂದು ಸ್ವಪಕ್ಷದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವದ ಕುರಿತು ವಾಗ್ದಾಳಿ ನಡೆಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವವರಿಗೆ ಅಭಿನಂದನಾ ಸಮಾರಂಭ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವರೇ ಬರುತ್ತಿದ್ದಾರೆ. ಇದು ದುರಂತ. ಅಪ್ರಾಪ್ತ ಹೆಣ್ಣುಮಕ್ಕಳ ರಕ್ಷಣೆಗಾಗಿ ಜಾರಿ ಮಾಡಿರುವ ಪೋಕ್ಸೋ ಕೇಸ್, ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ಕಾನೂನನ್ನೇ ದುರ್ಬಲ ಮಾಡಲು ಹೊರಟಿದ್ದಾರೆ. ಇದು ಇಡೀ ಆಡಳಿತ ವ್ಯವಸ್ಥೆಗೆ ಮಸಿ ಬಳಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನಾನು ಲಾಯರ್ ಓದಿದ್ದೇನೆ ಅಂತಾರೆ. ಫೊಕ್ಸೋ ಕೇಸ್ ಅರ್ಥವಾಗದ ನೀವು ಯಾವ ಸೀಮೆಯ ಲಾಯರ್? ಎಂದು ಕಿಡಿಕಾರಿದರು.
ಕಚೇರಿಯಲ್ಲೇ ಮಹಿಳೆ ಜೊತೆ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಬಳಿಕ ಅಮಾನತಾಗಿದ್ದ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ವಾಪಸ್ ಪಡೆದ ಸರಕಾರದ ವಿರುದ್ದ ಹರಿಹಾಯ್ದ ಎಚ್.ವಿಶ್ವನಾಥ್, ರಾಜ್ಯದ ಮಾನ ಕಳೆದ ರಾಮಚಂದ್ರರಾವ್ ಅಮಾನತು ಹಿಂಪಡೆದಿದ್ದಾರೆ. ಹಿಂಪಡೆಯಬೇಕಾದರೆ ಕಿಕ್ ಬ್ಯಾಕ್ ಎಷ್ಟಿರಬೇಕು ಅಲ್ಲವೇ..? ಹಣದ ವ್ಯವಹಾರವಿಲ್ಲದೇ ಇದು ಅಷ್ಟು ಸುಲಭವಾಗಿ ಆಗಿರುವುದಿಲ್ಲ . ಈ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಾ? ನಮಗೆ ರಕ್ಷಣೆ ಕೊಡಬೇಕಾದ ಇಲಾಖೆಯಲ್ಲೇ ಹೀಗಾದರೇ ಹೇಗೆ.? ಈಗಾಗಲೇ ಶಿಕ್ಷಣ, ಆರೋಗ್ಯ ಇಲಾಖೆ ಹಾಳಾಗಿದೆ . ನೀವು ಯಾವ ಸೀಮೆಯ ಅಧಿಕಾರ ನಡೆಸುತ್ತಿದ್ದೀರಾ ಎಂದು ಹರಿಹಾಯ್ದರು.
ಇದೆಲ್ಲವನ್ನೂ ಯುವಕರು ಯೋಚಿಸಬೇಕು. ತಮಿಳುನಾಡಿನಲ್ಲಿ ಯುವಕರು ಗೆದ್ದು ಇಡೀ ರಾಜಕೀಯ ವ್ಯವಸ್ಥೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕರ್ನಾಟಕದಲ್ಲೂ ಕೂಡ ಯುವಕರು ಎದ್ದೇಳಬೇಕು. ಕರ್ನಾಟಕದಲ್ಲೂ ಈ ಬದಲಾವಣೆ ತರಬೇಕು ಎಂದು ನುಡಿದರು.