×
Ad

ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ದುರ್ಬಳಕೆ ಆರೋಪ: ಸದನದಲ್ಲಿ ಗದ್ದಲ, ಕೋಲಾಹಲ

Update: 2025-08-20 20:26 IST

ಬೆಂಗಳೂರು: ‘ಪರಿಶಿಷ್ಟ ಜಾತಿ(ಎಸ್‍ಸಿ), ಪರಿಶಿಷ್ಟ ಪಂಗಡ(ಎಸ್‍ಟಿ)ಗಳ ಅಭಿವೃದ್ದಿಗೆ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ’ ಎಂಬ ಪ್ರತಿಪಕ್ಷ ಸದಸ್ಯರುಗಳ ಆರೋಪವು ವಿಧಾನಸಭೆಯಲ್ಲಿ ಕೆಲಕಾಲ ಏರಿದ ಧ್ವನಿಯಲ್ಲಿ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎಂ.ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಗೆ 2025-26ನೇ ಸಾಲಿನಲ್ಲಿ ಎಸ್‍ಸಿ-ಎಸ್‍ಟಿ ವರ್ಗಕ್ಕೆ 7ಸಾವಿರ ಕೋಟಿ ರೂ.ಗಳನ್ನು ಮಾತ್ರ ನೀಡಲಾಗಿದೆ. ಆದರೂ, 42,017.51 ಕೋಟಿ ರೂ.ಗಳನ್ನು ನೀಡಿದ್ದೇವೆ ಎಂದು ಸರಕಾರ ಸುಖಾಸುಮ್ಮನೆ ಡಂಗೂರ ಹೊಡೆಯುತ್ತಿದೆ ಎಂದು ದೂರಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಪರಿಶಿಷ್ಟರಿಗೆ ಇನ್ನು ಎಷ್ಟು ವರ್ಷ ನೆರವು ನೀಡಬೇಕೆಂಬ ಪ್ರಶ್ನೆಯನ್ನು ಸಾಮಾನ್ಯವರ್ಗದ ಜನ ಕೇಳುತ್ತಿದ್ದಾರೆ. ಪರಿಶಿಷ್ಟರ ಹೆಸರಿನಲ್ಲಿ 42ಸಾವಿರ ಕೋಟಿ ರೂ.ಗಳನ್ನು ಬೇರೆ-ಬೇರೆ ಇಲಾಖೆಗೆ ಹಂಚಿಕೆ ಮಾಡಲಾಗುತ್ತದೆ. ಅಷ್ಟು ಹಣವನ್ನು ಒಂದೇ ವೇದಿಕೆಗೆ ತಂದು ಸಮಾಜ ಕಲ್ಯಾಣ ಇಲಾಖೆಯಿಂದಲೇ ಖರ್ಚು ಮಾಡುವ ವ್ಯವಸ್ಥೆ ನಿರ್ಮಿಸಿದರೆ ನಿಜವಾಗಿಯೂ ಈ ವರ್ಗದ ಜನರ ಅಭಿವೃದ್ಧಿ ಸಾಧ್ಯ ಎಂದು ಚಂದ್ರಪ್ಪ ಸಲಹೆ ನೀಡಿದರು.

ಬಳಿಕ ಉತ್ತರ ನೀಡಿದ ಸಚಿವ ಡಾ.ಮಹದೇವಪ್ಪ, ‘ಪರಿಶಿಷ್ಟರ ಕಲ್ಯಾಣಕ್ಕೆ ಉಪಯೋಜನೆಯ ಸೆಕ್ಷನ್-7 ‘ಸಿ’ಅಡಿ ಸಮುದಾಯದ ಕಾರ್ಯಕ್ರಮಗಳನ್ನು ರೂಪಿಸುವ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಹಣ ಬಳಕೆಗೆ ಅವಕಾಶವಿದೆ. ಅದರಂತೆ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆ ಮಾಡಿದ್ದೇವೆ. ಎಲ್ಲ್ಲ ಯೋಜನೆಗಳಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಪಟ್ಟಿ ನೀಡದೆ ಇದ್ದರೆ ಉಪಯೋಜನೆಯ ಹಣ ಹಿಂಪಡೆಯಲಾಗುವುದು’ ಎಂದು ಹೇಳಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಅಡಿ 42,017.51 ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ. 2025ರ ಅಂತ್ಯಕ್ಕೆ 8,459 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಆಯವ್ಯಯದಲ್ಲೆ ಶೇ.24ರಷ್ಟು ಹಣವನ್ನು ಮೀಸಲಿಡಲಾಗುತ್ತಿದೆ. 2025-26ನೇ ಸಾಲಿನಲ್ಲಿ ಗೃಹಲಕ್ಷಿ-7,438ಕೋಟಿ ರೂ., ಅನ್ನಭಾಗ್ಯ-1,670ಕೋಟಿ ರೂ. ಗೃಹಜ್ಯೋತಿ-2626 ಕೋಟಿ ರೂ., ಶಕ್ತಿ ಯೋಜನೆ-1,537 ಕೋಟಿ ರೂ. ಹಾಗೂ ಯುವನಿಧಿಗೆ 162 ಕೋಟಿ ರೂ.ಸೇರಿ 13,433 ಕೋಟಿ ರೂ.ಬಳಕೆ ಮಾಡಲಾಗಿದೆ ಎಂದು ವಿವರ ನೀಡಿದರು.

ಎಲ್ಲ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯಿಂದಲೇ ಹಂಚಿಕೆ ಮಾಡಬೇಕು ಎಂದು ವಿಪಕ್ಷ ಸದಸ್ಯರು ಸಲಹೆ ನೀಡಿದ್ದು, ಇದು ಒಳ್ಳೆಯ ಸಲಹೆಯಾಗಿದೆ. ಆದರೆ, ಆಯಾ ಇಲಾಖೆಗಳಲ್ಲೂ ಕೆಲಸ-ಕಾರ್ಯಗಳು ನಡೆಯಬೇಕು. ಹೀಗಾಗಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಹಣಕಾಸು ಸೌಲಭ್ಯಗಳು ಹಾಗೆಯೆ ಮುಂದುವರಿಯಲಿವೆ ಎಂದು ಅವರು ತಿಳಿಸಿದರು.

ಬಳಿಕ ಮಾತನಾಡಿದ ಬಿಜೆಪಿ ಸದಸ್ಯ ಎಂ.ಚಂದ್ರಪ್ಪ, ‘ಸಾರಿಗೆ ಇಲಾಖೆಗೆ ಎಸ್‍ಸಿ, ಎಸ್‍ಟಿ ಉಪಯೋಜನೆಯಡಿ 1,500 ಕೋಟಿ ರೂ.ಗಳನ್ನು ನೀಡಲಾಗಿದೆ. ಈಗ ‘ಶಕ್ತಿ’ ಯೋಜನೆಗೆ 1,350 ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಹಾಗಿದ್ದರೆ ಸಾರಿಗೆ ಇಲಾಖೆಗೆ ನೀಡಿರುವ ಹಣ ಪರಿಶಿಷ್ಟರಿಗೆ ಯಾವ ರೀತಿಯಲ್ಲಿ ಬಳಕೆಯಾಗುತ್ತದೆ’ ಎಂದು ಪ್ರಶ್ನಿಸಿದರು.

ಈ ಹಿಂದೆ ಬಿಜೆಪಿ ಸರಕಾರ ಶೇ.40ರಷ್ಟು ಕಮಿಷನ್ ಪಡೆಯುತ್ತಿತ್ತು. ಅದನ್ನು ಉಳಿಸಿ ಗ್ಯಾರಂಟಿ ಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಇದೀಗ ಪರಿಶಿಷ್ಟರ ಹಣ ದುರುಪಯೋಗಪಡಿಸಿಕೊಳ್ಳುತ್ತಿದೆ. ಎಸ್‍ಎಸಿ, ಎಸ್‍ಟಿ ಸಮುದಾಯಕ್ಕೆ 42 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆಂದು ಯಾವ ಪುರುμÁರ್ಥಕ್ಕೆ ಹೇಳಿಕೊಳ್ಳುತ್ತಿದ್ದೀರಿ ಎಂದು ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಪ್ರತಿವರ್ಷವೂ ಸರಕಾರ ಪರಿಶಿಷ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ್ದಲ್ಲಿದ್ದರೆ ಬೇರೆ ಸರಕಾರಗಳು ಈ ರೀತಿ ಹಣ ದುರ್ಬಳಕೆ ಮಾಡಿಕೊಂಡಿದ್ದರೆ, ಸಚಿವ ಡಾ.ಮಹದೇವಪ್ಪ ಸಹಿಸಿಕೊಳ್ಳುತ್ತಿದ್ದರೆ’ ಎಂದು ಪ್ರಶ್ನಿಸಿದರು.

ಬಳಿಕ ಉತ್ತರಿಸಿದ ಸಚಿವ ಮಹದೆವಪ್ಪ, ‘ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಪರಿಣಾಮಕಾರಿ ಬಳಕೆಗಾಗಿ ಪುಲ್‍ಫಂಡ್ ಅಥವಾ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ವಿಧಾನ ಮಂಡಲದ ಎಸ್‍ಸಿ-ಎಸ್‍ಟಿ ಕಲ್ಯಾಣ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಫಲಾನುಭವಿಗಳ ಪಟ್ಟಿ ನೀಡದಿದ್ದರೆ ಅನುದಾನ ವಾಪಸ್: ಡಾ.ಮಹದೇವಪ್ಪ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ದಿಗೆ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಮೀಸಲಿಟ್ಟ ಹಣದ ಬಳಕೆಗೆ ಅರ್ಹ ಫಲಾನುಭವಿಗಳ ಪಟ್ಟಿ ನೀಡದಿದ್ದರೆ ಅನುದಾನ ಹಿಂಪಡೆಯಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಎಚ್.ಸಿ.ಬಾಲಕೃಷ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಗಂಗಾ ಕಲ್ಯಾಣ ಹಾಗೂ ಇತರ ಯೋಜನೆಗಳನ್ನು ಜಿಲ್ಲಾವಾರು ಅನುಷ್ಠಾನಗೊಳಿಸಲಾಗುತ್ತಿದೆ. ಕೊಳವೆಬಾವಿ ಕೊರೆದ ಬಳಿಕ, ವಿದ್ಯುತ್ ಸಂಪರ್ಕ ಕಲ್ಪಿಸುವುದು ಇಂಧನ ಇಲಾಖೆಯ ಜವಾಬ್ದಾರಿ. ಆ ಯೋಜನೆಯಡಿ 75ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಹೆಚ್ಚಿನ ವೆಚ್ಚವಾದರೆ ಆ ಮೊತ್ತವನ್ನು ಇಂಧನ ಇಲಾಖೆ ಭರಿಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News