×
Ad

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ದೂರು: ರಾಹುಲ್ ಗಾಂಧಿ ಹೇಳಿಕೆಗೆ ಧ್ವನಿಗೂಡಿಸಿದ ಸಚಿವರು

► ಬಿಜೆಪಿಯವರೇ ʼಮತಗಳ್ಳತನʼ ಮಾಡುತ್ತಿದ್ದಾರೆ, ನನ್ನ ಬಳಿ ಅಧಿಕೃತ ದಾಖಲೆಗಳಿವೆ : ಪ್ರಿಯಾಂಕ್ ಖರ್ಗೆ ► ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ : ಸಂತೋಷ್ ಲಾಡ್

Update: 2025-09-18 18:28 IST

ರಾಹುಲ್‌ ಗಾಂಧಿ | PC : PTI

ಬೆಂಗಳೂರು, ಸೆ.18: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಮಾಡಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ರಾಜ್ಯ ಸರಕಾರದ ಅನೇಕ ಸಚಿವರು ಧ್ವನಿಗೂಡಿಸಿದ್ದು, ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ಬಿಜೆಪಿಯವರೇ ಮತಗಳ್ಳತನ ಮಾಡುತ್ತಿದ್ದಾರೆ. ನನ್ನ ಬಳಿ ಅಧಿಕೃತ ದಾಖಲೆಗಳಿವೆ. ಸ್ವಲ್ಪ ಸಮಯ ಬಂದಾಗ ಅದನ್ನು ನಿಮ್ಮ ಮುಂದಿಡುತ್ತೇವೆ. ಇದೇನಾದರೂ ಹೊರಗಡೆ ಬಂದರೆ ಸರಕಾರಗಳೇ ಬಿದ್ದು ಹೋಗುತ್ತವೆ’ ಎಂದು ಹೇಳಿದರು.

‘ಆಳಂದ ಮತ ಕ್ಷೇತ್ರದಲ್ಲಿ ಮತಗಳವು ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, 2023ರ ಚುನಾವಣೆಗೂ ಮುನ್ನ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ತೆಗೆದು ಹಾಕಲಾಗಿತ್ತು. ಅದರ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಮತ್ತು ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೆವು. ಅದರ ಆಧಾರದ ಮೇಲೆ ಕಲಬುರಗಿಯಲ್ಲಿ ಎಫ್‍ಐಆರ್ ದಾಖಲಿಸಲಾಯಿತು. ಪರಿಶೀಲನೆ ಮಾಡಿದಾಗ ಮೊಬೈಲ್ ನಂಬರ್‍ಗಳು ಮಧ್ಯ ಪ್ರದೇಶ, ಬಿಹಾರ, ಗುಜರಾತ್‍ನಲ್ಲಿ ಪತ್ತೆಯಾಗಿತ್ತು. ಸಿಐಡಿ ತನಿಖಾಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಮೊಬೈಲ್ ನಂಬರ್ ಐಪಿ ವಿಳಾಸ ಎಲ್ಲೆಲ್ಲಿದೆ ಎನ್ನುವ ಮಾಹಿತಿ ಕೇಳಿದ್ದರು. ಆದರೆ, ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಅವರು ಆರೋಪಿಸಿದರು.

ಕೇಂದ್ರದ ಕೈಗೊಂಬೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದ್ದು, ಪ್ರಧಾನಿ ಹೇಳಿದಂತೆ ಕೇಳುತ್ತಿದೆ’ ಎಂದು ಆರೋಪಿಸಿದರು.

ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‍ಗಾಂಧಿ ಮತಗಳವು ಆರೋಪವನ್ನು ಮಾಡಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಮೂರನೇ ಅವಧಿಯಲ್ಲಿ ಜನಪ್ರಿಯತೆ ಕಡಿಮೆಯಾಗಿದೆ. ಹೀಗಾಗಿ, ವಿರೋಧಪಕ್ಷಗಳ ಮತ ತೆಗೆದು ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಬಿಜೆಪಿ ಅಧಿಕಾರ ಇರುವ ಕಡೆ ಇದು ಹೆಚ್ಚು ನಡೆಯುತ್ತದೆ. ಈ ರೀತಿ ಮಾಡದಿದ್ದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದೂ ರಾಮಲಿಂಗಾರೆಡ್ಡಿ ಅವರು ಟೀಕಿಸಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಇಡೀ ದೇಶದಲ್ಲಿ ಮತ ಕಳ್ಳತನ ಆಗಿರುವುದು ಸತ್ಯ. ಪ್ರಧಾನಿ ನರೇಂದ್ರ ಮೋದಿ ಅಕ್ರಮ ಮಾಡಿಯೇ ಚುನಾವಣೆಗಳನ್ನು ಗೆದ್ದಿದ್ದಾರೆ. ಆಳಂದ ಮತಕ್ಷೇತ್ರ ಚುನಾವಣೆ ಆಕ್ರಮ ಸಂಬಂಧ ಸಿಐಡಿ ತನಿಖಾಧಿಕಾರಿಗಳು ಚುನಾವಣಾ ಆಯೋಗಗಕ್ಕೆ ಪತ್ರ ಬರೆದಿದ್ದಾರೆ, ಆದರೆ ಇದಕ್ಕೆ ಉತ್ತರ ಕೊಟ್ಟಿಲ್ಲ. ಮೇಲ್ನೋಟದಲ್ಲಿ ಇದು ಸತ್ಯ ಆಗಿದೆ. ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ ಎಂದು ದೂರಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ರಾಹುಲ್ ಗಾಂಧಿ ಅವರ ಜೊತೆ ಇಡೀ ದೇಶ ಇದೆ. ನಮ್ಮ ಮತ ನಮ್ಮ ಹಕ್ಕು ಹೋರಾಟ ಮಾಡುತ್ತೇವೆ.ಅಲ್ಲದೆ, ಹಿಂಬಾಗಿಲಿನಿಂದ ಬಂದಿರುವ ಕೇಂದ್ರ ಸರಕಾರವನ್ನು ಕಿತ್ತು ಹಾಕುವವರೆಗೂ ನಾವು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News