8 ಮಂದಿ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ ಘೋಷಣೆ; ಇಲ್ಲಿದೆ ಮಾಹಿತಿ
ಬಿ.ನಾಗೇಂದ್ರ- ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರು
ಬೆಂಗಳೂರು, ಅ.27: ರಾಜ್ಯ ಸರಕಾರವು ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ಸೇರಿದಂತೆ ಎಂಟು ಮಂದಿ ಸಾಧಕರಿಗೆ 2023ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಬಿ.ನಾಗೇಂದ್ರ ಪ್ರಕಟಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಂಗ ಕ್ಷೇತ್ರದಿಂದ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ, ಧಾರ್ಮಿಕ ಕ್ಷೇತ್ರದಿಂದ ಮಹಾದೇವಮ್ಮ, ಶಿಕ್ಷಣ ಕ್ಷೇತ್ರದಿಂದ ರಾಮಣ್ಣ ಮಹಾದೇವ ಗಸ್ತಿ, ಸಮಾಜ ಸೇವೆ ಕ್ಷೇತ್ರದಿಂದ ಜಿ.ಓ.ಮಹಾಂತಪ್ಪ, ಸಾಮಾಜಿಕ ಸಂಘಟನೆ ಕ್ಷೇತ್ರದಿಂದ ಸೋಮಣ್ಣ, ವೈದ್ಯಕೀಯ ಕ್ಷೇತ್ರದಿಂದ ಶಾರದಪ್ರಭು ಹುಲಿ ನಾಯಕ, ಸಾಹಿತ್ಯ ಕ್ಷೇತ್ರದಿಂದ ಸುಕನ್ಯಾ ಮಾರುತಿ ಹಾಗೂ ರಂಗಭೂಮಿ ಕ್ಷೇತ್ರದಿಂದ ಸುಜಾತಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪ್ರಶಸ್ತಿಯು 5 ಲಕ್ಷ ರೂ.ನಗದು ಹಾಗೂ 20 ಗ್ರಾಂ ಚಿನ್ನದ ಪದಕ ಒಳಗೊಂಡಿರುತ್ತದೆ. ಅ.28ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ವಿವಿಧ ಕ್ಷೇತ್ರಗಳಿಂದ ಒಟ್ಟು 113 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ನಾಗೇಂದ್ರ ಹೇಳಿದರು.