ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ 3,400 ಕೋಟಿ ರೂ.ನೀಡಲು ಸಚಿವ ಸಂಪುಟ ಒಪ್ಪಿಗೆ
ಬೆಳಗಾವಿ : ಬೆಳಗಾವಿಯ ವಿಧಾನ ಮಂಡಲ ಚಳಿಗಾಲದ ಅಧಿವೇಶನದ ಮಧ್ಯೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು 3,400 ಕೋಟಿ ರೂ.ಗಳಷ್ಟು ಮೊತ್ತದ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಗುರುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿನ ಸಚಿವ ಸಂಪುಟ ಸಭಾಮಂದಿರದಲ್ಲಿ ನಡೆದ ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲು ನಿರ್ಧರಿಸಲಾಗಿದೆ.
ಜಿಲ್ಲೆಯ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕುಗಳಲ್ಲಿನ ಅಚ್ಚುಕಟ್ಟಿಗೆ ಕೃಷ್ಣಾ ನದಿಯಿಂದ ನೀರನ್ನು ಎತ್ತಿ, ರಾಯಬಾಗ ಉನ್ನತ ಮಟ್ಟದ ವಿತರಣಾ ಕಾಲುವೆ ಮತ್ತು ರಾಯಬಾಗ ವಿತರಣಾ ಕಾಲುವೆಗಳಿಗೆ ನೀರು ಹರಿಸುವ 210 ಕೋಟಿ ರೂ.ಗಳ ಮೊತ್ತದ ಏತ ನೀರಾವರಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಅಲ್ಲದೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆರೂರು ಏತ ನೀರಾವರಿ ಯೋಜನೆಯ 1,503ಕೋಟಿ ರೂ.ಗಳ ಮೊತ್ತದ ಪರಿಷ್ಕೃತ ಅಂದಾಜಿಗೆ ಸಂಪುಟ ಸಮ್ಮತಿಸಿದೆ.
ರಾಯಬಾಗ ತಾಲೂಕಿನ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ಚಿಕ್ಕೋಡಿ ಶಾಖಾ ಕಾಲುವೆಗೆ ನೀರು ಹರಿಸುವ 198ಕೋಟಿ ರೂ. ಗಳ ಅಂದಾಜು ಮೊತ್ತದ ಶ್ರೀ ಕರಸಿದ್ದೇಶ್ವರ ಏತ ನೀರಾವರಿ ಯೋಜನೆ, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮತ್ತು ಇತರೆ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸುವ 990ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆ, ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿನ 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆಯ 272 ಕೋಟಿ ರೂ.ಗಳ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ.
ಕೋರ್ಟ್‍ಗಳ ಸುಧಾರಣೆ: ‘ಜಿಲ್ಲಾ ನ್ಯಾಯಾಂಗ ಸುಧಾರಣೆಗಳ ವಿಧೇಯಕಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ವಿಧೇಯಕದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಮತ್ತು ಕೃಷಿ ಸೇರಿದಂತೆ ವಿವಿಧ ಸಿವಿಲ್ ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ತ್ವರಿತ ನ್ಯಾಯಾಲಯ ಸ್ಥಾಪಿಸುವುದು ಸೇರಿದಂತೆ ಜಿಲ್ಲಾ ನ್ಯಾಯಾಂಗಕ್ಕೆ ಸುಧಾರಣೆ ಸರಕಾರ ಮುಂದಾಗಿದೆ.
‘ಇಂದಿರಾ ಕಿಟ್’ ಮಾರ್ಪಾಡು: ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿರುವ ‘ಇಂದಿರಾ ಕಿಟ್'ನಲ್ಲಿ ಹೆಸರುಕಾಳಿನ ಬದಲಿಗೆ ತೊಗರಿ ಬೇಳೆ ನೀಡಲು ಹಿಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಪಡಿತರ ಚೀಟಿಯಲ್ಲಿನ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತೊಗರಿ ಬೇಳೆ ಹಂಚಿಕೆ ಮಾಡುವ ಸಂಬಂಧ ಕೆಲ ಮಾರ್ಪಾಡು ಮಾಡಲು ತೀರ್ಮಾನಿಸಲಾಗಿದೆ.