×
Ad

ಧರ್ಮಸ್ಥಳ ಪ್ರಕರಣದ ಎಫ್‌ಐಆರ್ ರದ್ದು ಕೋರಿ ಮತ್ತೊಂದು ಅರ್ಜಿ; ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಕಾರ

Update: 2025-11-19 21:15 IST

ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಸಂಸ್ಕಾರ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಬೇಕೆಂಬ ಉಜಿರೆಯ ಗಣೇಶ್‌ ಶೆಟ್ಟಿ ಅವರ ಮನವಿ ಪರಿಗಣಿಸಲು ಹೈಕೊರ್ಟ್‌ ನಿರಾಕರಿಸಿದೆ.

ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ (ಎಫ್‌ಐಆರ್ ಸಂಖ್ಯೆ- 39/2025) ಹಾಗೂ ಎಸ್‌ಐಟಿ ತನಿಖೆ ರದ್ದು ಕೋರಿ ಉಜಿರೆ ನಿವಾಸಿ ಗಣೇಶ್‌ ಶೆಟ್ಟಿ (29) ಎಂಬುವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಇತ್ಯರ್ಥವಾಗುವವರೆಗೆ ಎಫ್‌ಐಆರ್‌ ಮತ್ತು ಎಸ್‌ಐಟಿ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಮುಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಎಸ್ಐಟಿ ಪರ ಹಾಜರಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಅರ್ಜಿದಾರ ಗಣೇಶ್‌ ಶೆಟ್ಟಿ ಅವರ ಹೆಸರು ಇಲ್ಲ. ಅವರನ್ನು ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ಸಹ ನೀಡಿಲ್ಲ. ಆದರೂ ಅರ್ಜಿದಾರರು ಎಫ್‌ಐಆರ್‌ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮೂಲತಃ ಎಫ್‌ಐಆರ್‌ ರದ್ದತಿಗೆ ಕೋರಲು ಅರ್ಜಿದಾರರಿಗೆ ಯಾವುದೇ ಹಕ್ಕು ಹಾಗೂ ಅವಕಾಶ ಇಲ್ಲ. ಆದ್ದರಿಂದ, ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಿ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.

ಈ ಮನವಿ ಪರಿಗಣಿಸಿದ ನ್ಯಾಯಪೀಠ, ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿತು. ಜತೆಗೆ, ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News