319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಸಾಂದರ್ಭಿಕ ಚಿತ್ರ | PC : Image by jannoon028 on Magnific
ಬೆಂಗಳೂರು : 2026-27ನೆ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 319(ಉಳಿಕೆ ಮೂಲ ವೃಂದ 297+ ಹೈದರಾಬಾದ್ ಕರ್ನಾಟಕ ವೃಂದ 22) ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಅವಧಿಯನ್ನು ಸೆ.7ರವರೆಗೆ ವಿಸ್ತರಿಸಲಾಗಿದೆ.
ಜು.31ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಕೆ ಆರಂಭ ಆ.1 ರಿಂದ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನ ಆ.31ರಂದು ಎಂದು ತಿಳಿಸಲಾಗಿತ್ತು. ಆದರೆ, ಕೆಲವು ಅಭ್ಯರ್ಥಿಗಳು ಜಾತಿ ಆದಾಯ ಮತ್ತು ಒಳ ಮೀಸಲಾತಿ ಪ್ರಮಾಣ ಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ನಾಡಕಚೇರಿ ಮತ್ತು ಸೇವಾ ಸಿಂಧು ಪೋರ್ಟಲ್ ಸರ್ವರ್ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಪ್ರಮಾಣ ಪತ್ರಗಳು ದೊರೆಯುತ್ತಿಲ್ಲ.
ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಇಂಟರ್‍ನೆಟ್ ಸಂಪರ್ಕದ ಕೊರತೆಯಿಂದಾಗಿ ಶುಲ್ಕ ಪಾವತಿ ವೈಫಲ್ಯದ ಕಾರಣಗಳಿಂದಾಗಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸಾಧ್ಯವಾಗದ ಕಾರಣ ನಿಗದಿಪಡಿಸಲಾಗಿರುವ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದಾರೆ.
ಈ ಮನವಿಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆ.7ರವರೆಗೆ ವಿಸ್ತರಿಸಲಾಗಿದೆ. ಇನ್ನುಳಿದಂತೆ ಜು.31ರ ಅಧಿಸೂಚನೆಯಲ್ಲಿ ಯಾವುದೆ ಬದಲಾವಣೆಗಳು ಇರುವುದಿಲ್ಲ ಎಂದು ರಾಜ್ಯ ಲೋಕಸೇವಾ ಆಯೋಗದ ಕಾರ್ಯದರ್ಶಿ ಜ್ಯೋತಿ ಕೆ. ತಿದ್ದುಪಡಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.