ಆಶಾ ಕಾರ್ಯಕರ್ತೆಯರ ಸೇವೆ ಕಡೆಗಣಿಸುವ ಉದ್ದೇಶವಿಲ್ಲ: ಸಚಿವ ಯು.ಟಿ.ಖಾದರ್ ಸ್ಪಷ್ಟನೆ
ಶಿವಮೊಗ್ಗ : ‘ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ವ್ಯವಸ್ಥೆ ನಡೆಯುತ್ತದೆ’ ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದು, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಸೇವೆಯನ್ನು ಕಡೆಗಣಿಸುವ ಉದ್ದೇಶ ತಮ್ಮ ಹೇಳಿಕೆಯಲ್ಲಿ ಇರಲಿಲ್ಲ. ಅವರು ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್ಎಚ್ಎಂ) ಅಡಿಯಲ್ಲಿ ನೇಮಕಗೊಂಡಿದ್ದು, ಆರಂಭದಲ್ಲಿ ಅತ್ಯಲ್ಪಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 2014ರಲ್ಲಿ ತಾನು ಆರೋಗ್ಯ ಸಚಿವರಾಗಿದ್ದಾಗ ಕೇಂದ್ರ ಸರಕಾರ ನೀಡುವ ಅನುದಾನಕ್ಕೆ ಸಮನಾಗಿ ರಾಜ್ಯ ಸರಕಾರವೂ ಮ್ಯಾಚಿಂಗ್ ಗ್ರಾಂಟ್ ನೀಡುವ ನಿರ್ಧಾರ ಕೈಗೊಂಡಿತ್ತು ಎಂದರು.
ಆನಂತರದ ದಿನಗಳಲ್ಲಿ ಕೇಂದ್ರ ಸರಕಾರದ ಅನುದಾನ ಕಡಿಮೆಯಾದ ಸಂದರ್ಭದಲ್ಲಿ ರಾಜ್ಯ ಸರಕಾರವೇ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುವ ಜವಾಬ್ದಾರಿ ವಹಿಸಿಕೊಂಡಿದೆ. ಪ್ರಸಕ್ತ ಕನಿಷ್ಠ 8 ಸಾವಿರ ರೂ. ಪ್ರೋತ್ಸಾಹಧನ ದೊರೆಯುತ್ತಿದ್ದು, ಕೆಲಸದ ಪ್ರಮಾಣ ಹಾಗೂ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿಕೆಗೆ ಅನುಗುಣವಾಗಿ 13ರಿಂದ 16 ಸಾವಿರ ರೂ.ವರೆಗೆ ಪಡೆಯುವ ಕಾರ್ಯಕರ್ತೆಯರೂ ಇದ್ದಾರೆ ಎಂದು ವಿವರಿಸಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಸಹಾನುಭೂತಿ ಇದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟ ಸಭೆಯ ನಡುವೆಯೂ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಕೇಂದ್ರ ಸರಕಾರ ಭರವಸೆ ನೀಡಿದ್ದ ಹೆಚ್ಚುವರಿ 1,500 ರೂ.ಯನ್ನೂ ಇದುವರೆಗೆ ನೀಡಿಲ್ಲ ಎಂಬ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಆಶಾ ಕಾರ್ಯಕರ್ತೆಯರ ಬಗ್ಗೆ ಸರಕಾರಕ್ಕೆ ಕಾಳಜಿ ಇದ್ದು, ಈ ಸಂಬಂಧ ಆರ್ಥಿಕ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿಧಾನಮಂಡಲದ ಅಧಿವೇಶನ ಮುಕ್ತಾಯದ ವೇಳೆಗೆ ಸಿಹಿ ಸುದ್ದಿ ನೀಡುವ ಪ್ರಯತ್ನ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.
ಆಶಾ ಕಾರ್ಯಕರ್ತೆಯರು ಸರಕಾರ, ಮುಖ್ಯಮಂತ್ರಿ ಹಾಗೂ ಆರೋಗ್ಯ ಇಲಾಖೆಯ ಮೇಲೆ ವಿಶ್ವಾಸವಿಟ್ಟು ತಮ್ಮ ಕರ್ತವ್ಯಕ್ಕೆ ಮರಳಬೇಕು ಎಂದು ಮನವಿ ಮಾಡಿರುವ ಸಚಿವ ಖಾದರ್, ಅವರ ಹಿತಾಸಕ್ತಿಯನ್ನು ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ಪುನರುಚ್ಛರಿಸಿದರು.