ಶಿಕ್ಷಣ ಕೊಟ್ಟರೆ ಅಂಧಭಕ್ತರ ಸೈನ್ಯ ಇರಲ್ಲ ಎನ್ನುವ ಆತಂಕ ಮೋದಿ ಸರಕಾರಕ್ಕಿದೆ : ಆಶುತೋಷ್ ರಾಂಕಾ
‘ಗೌರಿ ದಿನ-ಜೆನ್‍ಝಿ ದಿನ’ ಉಪನ್ಯಾಸ ಕಾರ್ಯಕ್ರಮ
ಬೆಂಗಳೂರು : ದೇಶದೊಳಗೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆದಲ್ಲಿ ಅಂಧಭಕ್ತರ ಸೈನ್ಯವು ಇರುವುದಿಲ್ಲ ಎನ್ನುವ ಆತಂಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಆಶುತೋಷ್ ರಾಂಕಾ ಹೇಳಿದ್ದಾರೆ
ರವಿವಾರ ಸಂಜೆ ನಗರದ ಲಾಂಗ್‍ಫೋರ್ಡ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ‘ಗೌರಿ ದಿನ-ಜೆನ್‍ಝಿ ದಿನ’ ಉಪನ್ಯಾಸ ಮತ್ತು ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶ ಸಾಮಾಜಿಕವಾಗಿ ಮೊದಲು ಬದಲಾವಣೆ ಕಾಣಬೇಕು.ಇದಕ್ಕಾಗಿ ಶಿಕ್ಷಣ ಸುಧಾರಣೆಯೇ ಪರಿಹಾರ ಎನ್ನುವುದನ್ನು ನಾವು ನಂಬಿದ್ದೇವೆ. ಶಿಕ್ಷಣ ವ್ಯವಸ್ಥೆಯಲ್ಲಿ ಗರಿಷ್ಠ ಮಟ್ಟದ ಸುಧಾರಣೆ ಆದಲ್ಲಿ ಹಲವು ಸಮಸ್ಯೆಗಳಿಂದ ಬಚಾವ್ ಆಗಬಹುದು. ಆದರೆ, ಸುಧಾರಣೆ ಪ್ರಕ್ರಿಯೆಗೆ ಕೇಂದ್ರ ಸರಕಾರವೇ ಅಡ್ಡಿಯಾಗಿದೆ. ಕಳೆದ ಹನ್ನೇರಡು ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ನಡೆಸಿಕೊಂಡಿರುವ ರೀತಿ ಗಮನಿಸಬಹುದು. ಒಂದು ವೇಳೆ ಎಲ್ಲರೂ ಶಿಕ್ಷಣ ಪಡೆದುಕೊಂಡರೆ, ಜಾಗೃತಿಯಾದರೆ ಅಂಧಭಕ್ತರ ಸೈನ್ಯವು ದೊರೆಯುವುದಿಲ್ಲ ಎನ್ನುವ ಆತಂಕವೂ ಸರಕಾರಕ್ಕೆ ಇರಬಹುದು ಎಂದು ಟೀಕಿಸಿದರು.
ಕಾಕ್ರೋಚ್ ಜನತಾ ಪಾರ್ಟಿಯ ಮುಂದಿನ ಧ್ಯೇಯವೇ ಶಾಲಾ, ಕಾಲೇಜು ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು.ಇದಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟಗಳನ್ನು ರೂಪಿಸುತ್ತೇವೆ. ಇದೊಂದು ಜನಾಂದೋಲನ ಆಗಬೇಕು. ಸರಕಾರ ಯಾವ ಪಕ್ಷದ್ದೇ ಆಗಿರಲಿ, ವ್ಯವಸ್ಥೆಯಲ್ಲಿ ಆ ಕಾಲಕ್ಕೆ ಬದಲಾವಣೆ ಆಗಬೇಕು. ಜತೆಗೆ, ನಿರುದ್ಯೋಗ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆಯೂ ನಮ್ಮ ಪಕ್ಷ ದನಿಗೂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಹೊಸದಿಲ್ಲಿಯಲ್ಲಿ ಜಂತರ್ ಮಂತರ್ ನಲ್ಲಿ ಜೆನ್‍ಝಿಗಳ ಸಹಯೋಗದೊಂದಿಗೆ ನಡೆದ ಹೋರಾಟ ಹಾಗೂ ಕೇಂದ್ರದ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆಳವಣಿಗೆ ಹೊಸ ದಿಕ್ಕುಗಳನ್ನು ತೆರೆದಿದೆ. ಈಗ ಬಂದಿರುವ ಹೊಸ ಸಚಿವರ ಮೇಲೂ ನಮಗೆ ವಿಶ್ವಾಸ ಇಲ್ಲ. ಆದರೆ, ಅವರು ಪ್ರಧಾನ್‍ಗಿಂತ ಉತ್ತಮ ಎಂದೇ ಹೇಳಬಹುದು. ಪ್ರಧಾನ್ ಆಡಳಿತಾವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಪಾತಾಳಕ್ಕೆ ಹೋಗಿತ್ತು ಎಂದು ಅವರು ಹೇಳಿದರು.
ಸಿದ್ದಾಂತಗಳ ಮೇಲೆ ನನಗೆ ನಂಬಿಕೆ ಇಲ್ಲ. ಆದರೆ, ಮೌಲ್ಯಗಳನ್ನು ನಾನು ಗಾಢವಾಗಿ ನಂಬುತ್ತೇನೆ. ಹಾಗಾಗಿ, ಸಂವಿಧಾನವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನದಲ್ಲಿರುವ ಮೌಲ್ಯಗಳನ್ನು ಪರಿಪೂರ್ಣವಾಗಿ ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸವೂ ಆಗಬೇಕಾಗಿದೆ. ಸಾಂವಿಧಾನಿಕ ಮೌಲ್ಯಗಳು ಮತ್ತು ಆದರ್ಶಗಳ ಪಾಲನೆಯಲ್ಲಿ ಸಂವಿಧಾನದ ಯಶಸ್ಸು ಅಡಗಿದೆ ಎಂದು ಆಶುತೋಷ್ ರಾಂಕಾ ಪ್ರತಿಪಾದಿಸಿದರು.
ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ(ಎಸ್‍ಎಫ್‍ಐ) ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಐಶೆ ಘೋಷ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಸ್ವತಂತ್ರರಾಗಿರುತ್ತಾರೆ. ಮುಕ್ತವಾಗಿ ಮಾತನಾಡಲು ಅವಕಾಶ ಇರುತ್ತದೆ. ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ. ಇದು ಪ್ರಜಾಪ್ರಭುತ್ವದ ಸೌಂದರ್ಯ. ಆದರೆ ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಸರ್ವಾಧಿಕಾರ ಧೋರಣೆಯಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಿಂದ ಹೊರಗಿಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಬರುತ್ತದೆ ಎಂದ ಅವರು, ದೇಶದ ಎಲ್ಲೆಡೆ ಖಾಸಗೀಕರಣ ಶಿಕ್ಷಣ ವಿರೋಧಿಸಬೇಕಾಗಿದೆ. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಮುಂದೆ ಅನ್ಯಾಯ ನಡೆಯುತ್ತಿದ್ದರೆ ಅದನ್ನು ಪ್ರಶ್ನಿಸಬೇಕು. ನೋಡಿ ಸುಮ್ಮನಿದ್ದರೆ ನಾವು ಸಹ ಅದರ ಭಾಗವಾಗುತ್ತೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ವಿ.ಎಸ್.ಶ್ರೀಧರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ ಆದ ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಸಿನೆಮಾ ನಿರ್ದೇಶಕಿ, ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಅವರು ವಿವಿಧ ವಿದ್ಯಾರ್ಥಿ ಸಂಘಟನಗಳ ಮುಖಂಡರಾದ ಶರಣ್ಯಾ, ವೀಣಾ ನಾಯಕ್, ಅರ್ಪಿತಾ, ಮಹಾಂತೇಶ್, ದುರ್ಗೇಶ್, ನಳಿನಿ ಸೇರಿದಂತೆ ಪ್ರಮುಖರನ್ನು ವೇದಿಕೆಗೆ ಸ್ವಾಗತಿಸಿದರು. ಹೋರಾಟಗಾರ ಸರೋವರ್ ಬೆಂಕಿಕೆರೆ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದವರೇ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸಹ ಕೊಂದರು. ಒಟ್ಟಾರೆ, ಸರ್ವಾಧಿಕಾರಿಗಳು ಆಡಳಿತ ನಡೆಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಾರೆ. ಪ್ರಜೆಗಳು ಮುಕ್ತವಾಗಿ ಮಾತನಾಡಲು ಆಗದಂತಹ ಸನ್ನಿವೇಶ ನಿರ್ಮಿಸುತ್ತಾರೆ. ಜನ ವಿರೋಧಿ ನೀತಿ ವಿರುದ್ಧ ಮಾತನಾಡಲು ಸಾರ್ವಜನಿಕರು ಹೆದರುತ್ತಾರೆ. ಸರಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಅಟ್ಟಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ.
ದಾನಿಶ್ ಅಲಿ, ಜಂಟಿ ಕಾರ್ಯದರ್ಶಿ, ಜೆಎನ್‍ಯು ವಿದ್ಯಾರ್ಥಿ ಸಂಘಟನೆ
ಗೌರಿ ಲಂಕೇಶ್ ಸಹ ಕಾಕ್ರೋಚ್!
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ. ಒಂದು ವೇಳೆ ಗೌರಿ ಲಂಕೇಶ್ ಜೀವಂತವಾಗಿ ಇದ್ದಿದ್ದರೆ ಈ ದೇಶದ ಹೆಮ್ಮೆಯ ಕಾಕ್ರೋಚ್ ಆಗುತ್ತಿದ್ದರು. ಅವರು ಸಹ ನಮ್ಮ ಹೋರಾಟದ ಭಾಗವಾಗಿ ಉಳಿದುಕೊಳ್ಳುತ್ತಿದ್ದರು ಎಂದು ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಆಶುತೋಷ್ ರಾಂಕಾ ನುಡಿದರು.