ಪ್ರತಿಪಕ್ಷಗಳ ಗದ್ದಲದ ಮಧ್ಯೆ 8 ಮಹತ್ವದ ವಿಧೇಯಕಗಳ ಅಂಗೀಕಾರ
ಬೆಂಗಳೂರು: ಸಾಂಖ್ಯಿಕ ಮತ್ತು ಯೋಜನಾ ಇಲಾಖೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಉಭಯ ಸದನಗಳಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರ ಪ್ರತಿಭಟನೆ ಹಾಗೂ ಗದ್ದಲದ ಮಧ್ಯೆ ರಾಜ್ಯ ಸರಕಾರವೂ, ಹಲವು ಮಹತ್ವದ ವಿಧೇಯಕಗಳನ್ನು ಮಂಡಿಸಿ, ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವನ್ನು ಪಡೆದಿದೆ.
ಸೋಮವಾರ ವಿಧಾನಸಭೆಯಲ್ಲಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇತ್ತ ‘ಅದಾನಿಗೆ ಸನ್ಮಾನ, ನಾಗೇಂದ್ರಗೆ ಮಂತ್ರಿ ಸ್ಥಾನ, ಸಚಿವ ನಾಗೇಂದ್ರ ರಾಜೀನಾಮೆ ನೀಡಲೇಬೇಕು’ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಿದ್ದರೆ, ಅತ್ತ ಸರಕಾರ, ‘ಸರಕಾರಿ ಉದ್ಯಾನವನಗಳ(ಸಂರಕ್ಷಣೆ) (ತಿದ್ದುಪಡಿ) ವಿಧೇಯಕ-2026’ ಸೇರಿದಂತೆ ಎಂಟು ವಿಧೇಯಕಗಳನ್ನು ಮಂಡಿಸಿ, ಅಂಗೀಕಾರವನ್ನು ಪಡೆಯಿತು.
ಗುತ್ತಿಗೆ, ಪರಭಾರೆ: ಸರಕಾರಿ ಉದ್ಯಾನವನದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ.5ರಷ್ಟು ಮಿತಿಯವರೆಗೆ ಮಾರಾಟ, ಗುತ್ತಿಗೆ, ಉಡುಗೊರೆ ವಿನಿಮಯ, ಅಡಮಾನ ವಿಧಾನಗಳ ಮೂಲಕ ಉದ್ಯಾನದ ಭೂಮಿ ಪರಭಾರೆಗೆ ಅನುಮತಿ ನೀಡುವ ‘2026ನೇ ಸಾಲಿನ ಕರ್ನಾಟಕ ಸರಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ’ಕ್ಕೆ ಚರ್ಚೆಯಿಲ್ಲದೆ ಒಪ್ಪಿಗೆ ನೀಡಲಾಯಿತು.
ದಂಡಕ್ಕೆ ಅವಕಾಶ: ಡಿಸಿಎಂ ಡಾ.ಪರಮೇಶ್ವರ್ ಮಂಡಿಸಿದ ‘ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ’ವು ಸಾರ್ವಜನಿಕ ಹಿತದೃಷ್ಟಿಯಿಂದ ಉಪನೋಂದಣಾಧಿಕಾರಿಗಳು ಸ್ವತ್ತಿನ ನೋಂದಣಿ ವೇಳೆ ಕೈಗೊಳ್ಳಬೇಕಾದ ಯುಕ್ತ ಕಾರ್ಯತತ್ಪರತೆಯನ್ನು ಖಚಿತಪಡಿಸಲು ನಗರ ಪ್ರದೇಶಗಳಲ್ಲಿನ ಸ್ವತ್ತುಗಳ ಕಾನೂನುಬಾಹಿರ ನೋಂದಣಿ ತಡೆಯಲು, ಸ್ವತ್ತಿನ ನೋಂದಣಿ ಪ್ರಕ್ರಿಯೆ ಸರಳಗೊಳಿಸಲು ಈ ನೋಂದಣಿಗೆ ಅವಕಾಶ ಕಲ್ಪಿಸಲು, ವಿಳಂಬ ತಪ್ಪಿಸಲು, ಇಲಾಖೆಯ ಸಾಫ್ಟ್‍ವೇರ್ ಪೋರ್ಟಲ್ ಅನ್ನು ತಿರುಚುವುದು, ಹ್ಯಾಕ್ ಮಾಡುವುದಕ್ಕೆ ದಂಡ ವಿಧಿಸುವ ಉದ್ದೇಶವನ್ನು ಹೊಂದಿದೆ.
ಮರು ಸೇರ್ಪಡೆ: ‘ಕರ್ನಾಟಕ ಭೂ ಕಂದಾಯ(ತಿದ್ದುಪಡಿ)ವಿಧೇಯಕ’ವು ನಕಲು ದಾಖಲೆ ಸೃಷ್ಟಿ, ಮೌಲ್ಯಯುತ ಭದ್ರತೆ, ಮೋಸ ಮಾಡುವುದು, ‘ದುಷ್ಪ್ರೇರಿಸು, ಮೋಸಮಾಡುವುದು, ನಕಲು ದಾಖಲೆ ಸೃಷ್ಟಿ, ಮೌಲ್ಯಯುತ ಭದ್ರತೆ’ ಎಂಬ ಪದಗಳನ್ನು ಪರಿಭಾವಿಸುವುದು, ‘ಪ್ರಮಾಣಿಕೃತ ನಕಲು’ ಎಂಬ ಪದವನ್ನು ಮರು ಪರಿಭಾವಿಸುವುದು ಎಂಬ ಅಂಶವನ್ನು ಒಳಗೊಂಡಿದೆ.
ಔದ್ಯೋಗಿಕ ಸುರಕ್ಷತೆ: ‘ಕರ್ನಾಟಕ ಅಂಗಡಿಗಳ ಮತ್ತು ವಾಣಜ್ಯ ಸಂಸ್ಥೆಗಳ ವಿಧೇಯಕ’ವು ಶುಲ್ಕಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸುವುದು. ಅಪರಾಧಗಳ ರಾಜಿ ಮತ್ತು ಅಪೀಲು ಮಾಡುವುದಕ್ಕೆ ಉಪಬಂಧವನ್ನು ನೇಮಿಸಲು ಅನುವು ಮಾಡಿಕೊಡಲಿದೆ.
ದಟ್ಟಣೆ ನಿವಾರಣೆ: ‘ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ’ವು ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಮತ್ತು ಸಂಚಾರ ದಟ್ಟಣೆ ಸವಾಲುಗಳ್ನು ಪರಿಹರಿಸಲು ಈ ವಿಧೇಯಕ ತರಲಾಗಿದೆ.
‘ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕವು, ರಾಜ್ಯ ನೋಡಲ್ ಏಜೆನ್ಸಿ ಮತ್ತು ಅದರ ಪ್ರಕಾರಗಳ ಸಂರಚನೆಯನ್ನು ಉಪಬಂಧಿಸಲು ಅವಕಾಶ ಮಾಡಿಕೊಡುತ್ತದೆ. ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರನ್ನು ಅಧ್ಯಕ್ಷರಾಗಿ ರಾಜ್ಯಮಟ್ಟದ ಪ್ರಾಧಿಕೃತ ಸಮಿತಿಗೆ ಸೇರಿಸಲು ಅವಕಾಶ ಕಲ್ಪಿಸಲಿದೆ. ಅಲ್ಲದೆ ಸ್ವೀಕೃತಿ ಪ್ರಮಾಣ ಪತ್ರ ಪದವನ್ನು ‘ಅಫಿಡವಿಟ್ ಆಧಾರಿತ ಒಪ್ಪಿಗೆ ನೀಡಿಕೆ ಪ್ರಮಾಣಪತ್ರ’ ಎಂದು ಬದಲಾಯಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಿದೆ.
‘ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವು, ಅನುಮೋದನೆ ಇಲ್ಲದ ಬಡಾವಣೆಗಳ ಹೆಚ್ಚಳವನ್ನು ತಡೆಗಟ್ಟಲು ಮತ್ತು ಗ್ರಾ.ಪಂಗಳ ಸಂಪನೂಲವನ್ನು ವೃದ್ಧಿಸಲು ಸ್ವತ್ತುಗಳ ಮೇಲೆ ತೆರಿಗೆಗಳನ್ನು ವಿಧಿಸಲು ಮತ್ತು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಹಳ್ಳಿಗಳಲ್ಲಿ ಯೋಜನಾ ರಹಿತ ವಿಧಾನದಲ್ಲಿ ಭೂಪರಿವರ್ತನೆ ಮತ್ತು ನಕ್ಷೆ ಅನುಮೋದನೆ ಇಲ್ಲದೆ ಅಕ್ರಮ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಹಲವು ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇಂತಹ ಕಟ್ಟಡಗಳಿಗೆ ಶುಲ್ಕ ವಿಧಿಸಲು ಅವಕಾಶ ಮಾಡಿಕೊಡಲಿದೆ.
ತೆರಿಗೆ ಸುಧಾರಣೆ: ‘ಕರ್ನಾಟಕ ಸರಕು ಮತ್ತು ಸೇವೆಗಳ (ತಿದ್ದುಪಡಿ ವಿಧೇಯಕ) 2026’ ಅನ್ನು ಹೊಸ ತೆರಿಗೆ ವ್ಯವಸ್ಥೆಯಿಂದ ಉಂಟಾದ ತೊಂದರೆಗಳನ್ನು ನಿವಾರಿಸಲು ಹಾಗೂ ತೆರಿಗೆ ಪಾವತಿಯೊಂದಿಗೆ ಹೊರಗೆ ರಫ್ತು ಮಾಡಲಾದ ಸರಕುಗಳಿಗೆ ಸಂಬಂಧಿಸಿದ ಮರುಪಾವತಿ ಕೋರಿಕೆಗಳನ್ನು ಮಂಜೂರು ಮಾಡುವುದಕ್ಕೆ ಅನ್ವಯಿಸುವ ಕನಿಷ್ಟ ಮಿತಿಯನ್ನು ತೆಗೆದು ಹಾಕಲು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ವಿಧೇಯಕಗಳು: ‘ಕರ್ನಾಟಕ ಸರಕು ಮತ್ತು ಸೇವೆಗಳ(ತಿದ್ದುಪಡಿ)ವಿಧೇಯಕ, ನೋಂದಣಿ(ಕರ್ನಾಟಕ ತಿದ್ದುಪಡಿ)ವಿಧೇಯಕ, ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ (2ನೆ ತಿದ್ದುಪಡಿ) ವಿಧೇಯಕ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ(ತಿದ್ದುಪಡಿ)ವಿಧೇಯಕ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ಕೈಗಾರಿಕೆಗಳ(ಸೌಲಭ್ಯ)(ತಿದ್ದುಪಡಿ)ವಿಧೇಯಕ ಹಾಗೂ ಕರ್ನಾಟಕ ಸರಕಾರಿ ಉದ್ಯಾನವನಗಳ(ಸಂರಕ್ಷಣೆ)(ತಿದ್ದುಪಡಿ) ವಿಧೇಯಕ’ ಸೇರಿದಂತೆ ಒಟ್ಟು 8 ವಿಧೇಯಗಳನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಯಿತು.