ಬಿ.ವೈ. ವಿಜಯೇಂದ್ರ (File Photo)

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯಲ್ಲಿ ನಡೆದಿರುವ ಶೂಟೌಟ್ ಪ್ರಕರಣದ ಸತ್ಯಾಂಶವನ್ನು ರಾಜ್ಯ ಸರಕಾರ ಮರೆಮಾಚುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಸತ್ಯಾಂಶ ತಿಳಿದುಕೊಳ್ಳಲು ಪಕ್ಷದಿಂದ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಸಮಿತಿ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿರುವ ಬೆನ್ನಲ್ಲೇ ಪ್ರಕರಣದ ಕುರಿತು ಮತ್ತಷ್ಟು ಗಂಭೀರ ಪ್ರಶ್ನೆಗಳು ಮತ್ತು ಅನುಮಾನಗಳು ಉದ್ಭವಿಸಿವೆ ಎಂದು ಹೇಳಿದರು.


ವರದಿ ಏಕೆ ಬಿಡುಗಡೆ ಮಾಡುತ್ತಿಲ್ಲ?:

ಹನೂರು ಪ್ರಕರಣದಲ್ಲಿ ಆತುರಾತುರವಾಗಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಇಷ್ಟಾದರೂ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಸಾರ್ವಜನಿಕವಾಗಿಲ್ಲ. ವರದಿ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂಬುದಕ್ಕೆ ಸರಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಅನುಮಾನ:

ಘಟನೆಯ ಫೋಟೋಗಳನ್ನು ಪ್ರದರ್ಶಿಸಿದ ವಿಜಯೇಂದ್ರ, ಮೃತ ವ್ಯಕ್ತಿಯ ಭುಜದ ಭಾಗದಲ್ಲಿ ಗನ್ ಇಟ್ಟು ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವಂತೆ ಫೋಟೋಗಳಲ್ಲಿ ಕಾಣಿಸುತ್ತಿದೆ. ಅದೇ ರೀತಿ, ಕತ್ತಿನ ಹಿಂಭಾಗದಲ್ಲಿ ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವ ಗುರುತುಗಳಿವೆ. ತಜ್ಞರ ಅಭಿಪ್ರಾಯದ ಪ್ರಕಾರ ಇದು ದೂರದಿಂದ, ಅಂದರೆ ಲಾಂಗ್ ರೇಂಜ್‍ನಿಂದ ಗುಂಡು ಹಾರಿಸಿದ ಪ್ರಕರಣದಂತೆ ಕಾಣುವುದಿಲ್ಲ. ಸಮೀಪದಿಂದ ಗುಂಡು ಹಾರಿಸಿರುವ ಸಾಧ್ಯತೆಗಳಿವೆ ಎಂದು ಅವರು ದೂರಿದರು.

ಮೇಲ್ಕಂಡ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದಾಗ, ಇದು ಸಾಮಾನ್ಯ ಎನ್‍ಕೌಂಟರ್ ಪ್ರಕರಣವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಅನುಮಾನ ಮೂಡುತ್ತಿದೆ. ಎನ್‍ಕೌಂಟರ್ ನಲ್ಲಿ ಮೃತಪಟ್ಟವರು ಈ ಹಿಂದೆ ಯಾವುದೇ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದವರು ಅಲ್ಲ ಎಂದು ವಿಜಯೇಂದ್ರ ಹೇಳಿದರು.

ಪ್ರಕರಣ ನಡೆದ ಸ್ಥಳದಿಂದ ಪರಾರಿಯಾಗಿರುವ ಮಹಿಮಾದಾಸ್ ಎಂಬ ವ್ಯಕ್ತಿ ಎಲ್ಲಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಬೇಕು. ಮಹಿಮಾದಾಸ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿರಬಹುದು. ಆದರೆ ಅವರನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ಬಚ್ಚಿಡುವ ಪ್ರಯತ್ನ ಮಾಡುತ್ತಿವೆಯೇ? ಎಂಬ ಅನುಮಾನ ಮೂಡಿದೆ. ಅವರು ಎಲ್ಲಿದ್ದಾರೆಂಬುದನ್ನು ಸರಕಾರ ಬಹಿರಂಗಪಡಿಸಬೇಕು ಎಂದು ವಿಜಯೇಂದ್ರ ಹೇಳಿದರು.

ಅಕ್ರಮ ನಡೆಯುತ್ತಿತ್ತೇ?:

ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಯಾವುದಾದರೂ ಅಕ್ರಮ ನಡೆಯುತ್ತಿತ್ತೇ?. ಆ ಅಕ್ರಮದ ಬಗ್ಗೆ ಎನ್‍ಕೌಂಟರ್‍ಗೆ ಗುರಿಯಾದವರಿಗೆ ಮಾಹಿತಿ ಇತ್ತೇ? ಆ ಕಾರಣಕ್ಕಾಗಿಯೇ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು

ರಾಜೀನಾಮೆ ನೀಡಲಿ:

ಪ್ರಕರಣದಲ್ಲಿ ಅರಣ್ಯ ಇಲಾಖೆಯ ಪಾತ್ರದ ಬಗ್ಗೆಯೇ ಗಂಭೀರ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ರಾಜ್ಯ ಸರಕಾರದ ಅಧೀನದಲ್ಲಿರುವ ಇಲಾಖೆಗಳ ಪ್ರಭಾವದಿಂದ ತನಿಖೆಯನ್ನು ಮುಕ್ತಗೊಳಿಸಬೇಕು. ಆದುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಪರಿಹಾರ ನೀಡಿ:

ಎನ್‍ಕೌಂಟರ್ ನಲ್ಲಿ ಮೃತಪಟ್ಟವರು ಬಡ ಕುಟುಂಬಗಳಿಗೆ ಸೇರಿದವರು. ಅವರ ಕುಟುಂಬಗಳು ಈಗ ಸಂಕಷ್ಟದಲ್ಲಿವೆ. ಸರಕಾರ ಮಾನವೀಯ ದೃಷ್ಟಿಯಿಂದ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ.ಪರಿಹಾರ ನೀಡಬೇಕು. ಕುಟುಂಬದ ಸದಸ್ಯರಿಗೆ ಸೂಕ್ತ ಸರಕಾರಿ ನೆರವು ಮತ್ತು ಉದ್ಯೋಗದ ವ್ಯವಸ್ಥೆ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.


‘ಹನೂರು ಶೂಟೌಟ್ ಪ್ರಕರಣದ ಸತ್ಯಾಂಶವನ್ನು ಸರಕಾರ ಜನರ ಮುಂದೆ ಬಹಿರಂಗಪಡಿಸಬೇಕು. ಮರಣೋತ್ತರ ಪರೀಕ್ಷೆಯ ವರದಿಯನ್ನು ಬಿಡುಗಡೆ ಮಾಡಬೇಕು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಪ್ರಕರಣವನ್ನು ತಕ್ಷಣ ಸಿಬಿಐ ತನಿಖೆಗೆ ವಹಿಸಬೇಕು’

-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor