ಬೆಂಗಳೂರು: ರಾಜ್ಯವು ಪ್ರಸ್ತುತ ಸಾಲಿನಲ್ಲಿ ತೀವ್ರ ಸ್ವರೂಪದ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಾಜ್ಯದ 240 ತಾಲೂಕುಗಳ ಪೈಕಿ 189 ತಾಲೂಕುಗಳು ಮಳೆ ಕೊರತೆಯನ್ನು ಅನುಭವಿಸುತ್ತಿವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಉಭಯ ಸದನಗಳಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೂ.1ರಿಂದ ಆ.24ರ ವರೆಗೆ 654ಮಿಲಿ ಮೀಟರ್ ಮಳೆಯಾಗಬೇಕಾದ ಕಡೆ ಕೇವಲ 454ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಶೇ.31ರಷ್ಟು ಮಳೆ ಕೊರತೆಯಾದಂತಾಗಿದೆ. ಉತ್ತರ ಒಳನಾಡಿನಲ್ಲಿ ಶೇ.31, ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.35 ಮತ್ತು ಕರಾವಳಿಯಲ್ಲಿ ಶೇ.24ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ 240 ತಾಲ್ಲೂಕುಗಳ ಪೈಕಿ 175 ತಾಲ್ಲೂಕುಗಳು ಮಳೆ ಕೊರತೆಯನ್ನು ಮತ್ತು 14 ತಾಲೂಕುಗಳು ತೀವ್ರ ಮಳೆ ಕೊರತೆಯನ್ನು ಅನುಭವಿಸುತ್ತಿವೆ ಎಂದರು.

ಆ.14ರ ವರೆಗಿನ ಅಂಕಿ ಅಂಶಗಳಂತೆ ರಾಜ್ಯದಲ್ಲಿ ಶೇ.71ರಷ್ಟು ಬಿತ್ತನೆಯಾಗಿದೆ. 84.10 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತೋಟಗಾರಿಕೆ ಬೆಳೆಗಳು 4.36 ಲಕ್ಷ ಹೆಕ್ಟೇರುಗಳ ಪೈಕಿ ಕೇವಲ 2.45 ಲಕ್ಷ ಹೆಕ್ಟೇರುಗಳಲ್ಲಿ ಮಾತ್ರ ಬಿತ್ತನೆಯಾಗಿವೆ. ಬಿತ್ತನೆಯಾದ ಬೆಳೆಗಳಿಗೂ ಮಳೆ ಸಾಲದೆ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಮಳೆಯ ಕೊರತೆಯ ನಡುವೆಯೆ ಬೆಳೆಯುವ ಅಲ್ಪಾವಧಿ ತಳಿಗಳನ್ನು ಬೆಳೆಯುವಂತೆ ತಿಳುವಳಿಕೆ ನೀಡಿ ರೈತರಿಗೆ ಬಿತ್ತನೆ ಬೀಜವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಕೆಲವು ದಿನಗಳ ಹಿಂದೆ ತುಸುಮಳೆ ಬಂದ ಕಾರಣ ರಾಜ್ಯದ ಅಣೆಕಟ್ಟುಗಳಲ್ಲಿ ಒಂದಿಷ್ಟು ನೀರು ಸಂಗ್ರಹವಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 790 ಟಿಎಂಸಿಗಳಷ್ಟು ನೀರು ಸಂಗ್ರಹವಾಗಿತ್ತು. ಈ ವರ್ಷ 679.6 ಟಿಎಂಸಿಗಳಷ್ಟು ಮಾತ್ರ ಸಂಗ್ರಹವಾಗಿದೆ. ಕೆ.ಆರ್.ಎಸ್ ಜಲಾಶಯದಲ್ಲಿ ಶೇ.61ರಷ್ಟು ಮಾತ್ರ ನೀರಿದೆ. ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳಲ್ಲೂ ನೀರಿನ ಸಂಗ್ರಹಣೆ ನಗಣ್ಯ ಸ್ವರೂಪದಲ್ಲಿದೆ ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor