×
Ad

ಸೌಜನ್ಯಾ ಕುಟುಂಬದವರ ಮೇಲೆ ನಡೆದ ದೌರ್ಜನ್ಯ ಖಂಡನೀಯ: ಜನವಾದಿ ಮಹಿಳಾ ಸಂಘಟನೆ

Update: 2023-08-05 22:37 IST
ಘಟನೆಯ ಚಿತ್ರ

ಬೆಂಗಳೂರು, ಆ.5: ಧರ್ಮಸ್ಥಳದ ಉಜಿರೆಯಲ್ಲಿ ಶುಕ್ರವಾರ ‘ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಎಂಬ ಸಂಘಟನೆಯವರು ಸೌಜನ್ಯಾಳ ಕುರಿತು ನಡೆಸುತ್ತಿದ್ದ ಸಮಾವೇಶ, ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಲೆಂದು ಹೋಗಿದ್ದ ಸೌಜನ್ಯಾಳ ತಾಯಿ ಕುಸುಮಾವತಿ ಹಾಗೂ ಸಹೋದರಿಯರಾದ ಸೌಂದರ್ಯ, ಸೌಹಾರ್ದ ಮತ್ತು ಸಹೋದರ ಜಯರಾಮ ಅವರನ್ನು ಅಪಮಾನಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ನೀಚತನವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದ್ದಾರೆ.

ಸೌಜನ್ಯಾಳ ಕುಟುಂಬಕ್ಕೆ ಅಲ್ಲಿ ರಕ್ಷಣೆ ಇಲ್ಲ ಎಂಬುದು ಗೋಚರಿಸುತ್ತಿದೆ. ಆದುದರಿಂದ, ಅವರಿಗೆ ಸರಕಾರ ಸೂಕ್ತ ರಕ್ಷಣೆ ನೀಡಬೇಕು. ದೀರ್ಘ ಅವಧಿಯ ನಂತರ ಈಗ ಸಿ.ಬಿ.ಐ ನ್ಯಾಯಾಲಯವು ಸಂತೋಷರಾವ್ ನಿರಪರಾಧಿ ಎಂದು ಬಿಡುಗಡೆ ಮಾಡಿ ನಿರಪರಾಧಿಯೊಬ್ಬನಿಗೆ ನ್ಯಾಯದಾನ ನೀಡಿದೆ. ಈಗ ನಿಜವಾದ ಅಪರಾಧಿ ಯಾರೆಂದು ಪತ್ತೆ ಹಚ್ಚಬೇಕಾದ ಜವಾಬ್ದಾರಿ ಸರಕಾರದಾಗಿದೆ ಎಂದು ಅವರು ಹೇಳಿದ್ದಾರೆ.

ಸೌಜನ್ಯಾಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದವರನ್ನು ಮತ್ತು ಕೊಲೆಗಡುಕರನ್ನು ಬಚಾವ್ ಮಾಡುತ್ತಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕುಸುಮಾವತಿ ತಮ್ಮ ಮಗಳ ಪರವಾಗಿ ನಡೆಯುತ್ತಿರುವ ಹೋರಾಟ ಆದ್ದರಿಂದ ನಮಗೆ ವೇದಿಕೆ ಮೇಲೆ ಅವಕಾಶ ಕೊಡಿ ಎಂದು ಕೇಳಿದ್ದೆ ಅಪರಾಧ ಎಂಬಂತೆ ಆಯೋಜಕರು ಘೋಷಣೆ ಕೂಗುತ್ತ ದೂರ ಸರಿಸಿದ್ದಾರೆ. ಜಯರಾಮನ ಕಾಲರ್ ಪಟ್ಟಿ ಹಿಡಿದು ಎಳೆದಾಡಲಾಗಿದೆ. ಕುಸುಮಾವತಿಯವರು ತಮ್ಮ ಮೈ ಮುಟ್ಟಿ ವೇಲ್ ಹಿಡಿದು ಎಳೆದಾಡಿದ್ದಾರೆ ಎಂದು ದೂರಿದ್ದಾರೆ ಎಂದು ಮೀನಾಕ್ಷಿ ಬಾಳಿ ಹಾಗೂ ದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News