×
Ad

2024ನೇ ಸಾಲಿನ ಜಾನಪದ ಅಕಾಡಮಿ ಪ್ರಶಸ್ತಿ ಪ್ರಕಟ

Update: 2025-03-01 20:21 IST

ಬೆಂಗಳೂರು : ಕರ್ನಾಟಕ ಜಾನಪದ ಅಕಾಡಮಿಯ ವತಿಯಿಂದ 2024ನೇ ಸಾಲಿನ ಜಾನಪದ ಪ್ರಶಸ್ತಿ ಪ್ರಕಟಿಸಲಾಗಿದ್ದು, ಪ್ರತಿ ಜಿಲ್ಲೆಯಿಂದ ಒಬ್ಬರಂತೆ 30 ಜನ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ತಜ್ಞರಿಗೆ ಜಾನಪದ ತಜ್ಞ ಪ್ರಶಸ್ತಿ ನೀಡಲಾಗಿದೆ ಎಂದು ಜಾನಪದ ಅಕಾಡಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದ್ದಾರೆ.

ಶನಿವಾರ ನಗರದ ಕನ್ನಡ ಭವನದಲ್ಲಿರವ ಅಂತರಂಗ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಕಲಾವಿದ ಡಾ.ಜೋಗಿಲ ಸಿದ್ಧರಾಜು, ತತ್ವಪದ ಮತ್ತು ಗೀಗೀಪದದ ಸಿದ್ದಯ್ಯ ಸಿ.ಎಚ್, ಡೊಳ್ಳುಕುಣಿತ ಎಂ.ಮಹೇಶ್, ಕೋಲಾಟ ಸುನಂದಮ್ಮ, ಅರೆವಾದ್ಯ- ತಮಟೆ ಕಲಾವಿದ ವೆಂಕಟರಮಣಪ್ಪ, ಕಿನ್ನರಿ ಜೋಗಿ ಕಲಾವಿದ ಸಿದ್ದಪ್ಪ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದರು.

ದಾವಣಗೆರೆಯ ಭಜನೆ ಕಲಾವಿದ ಮಾರ್ತಾಂಡಪ್ಪ, ಹಗಲುವೇಷ ಕಲಾವಿದ ಎ.ಶ್ರೀನಿವಾಸ್, ಹಸೆ ಚಿತ್ತಾರ ಕಲಾವಿದೆ ಗೌರಮ್ಮ, ಚರ್ಮವಾದ್ಯ ನಗಾರಿ ಕಲಾವಿದ ಮಂಜುನಾಥ್, ಜನಪದ ಕಲಾವಿದ ಹುರುಗಲವಾಡಿ ರಾಮಯ್ಯ, ಕೋಲಾಟ ಕಲಾವಿದ ಬಿ.ಟಿ.ಮಾನವ, ಭಜನೆ ಕಲಾವಿದ ಬಿ.ಪಿ.ಪರಮೇಶ್ವರಪ್ಪ, ತಂಬೂರಿ ಪದ ಕಲಾವಿದ ಸಿದ್ದರಾಜು ಆರ್., ದಕ್ಷಿಣ ಕನ್ನಡ ಪಾಡ್ದನ ಕಲಾವಿದೆ ಜಯಂತಿ, ಜನಪದ ಗಾಯನ ಎನ್.ಗಣೇಶ್ ಗಂಗೊಳ್ಳಿ, ಬುಡಕಟ್ಟು ಕೋಲಾಟ ಕಲಾವಿದೆ ಎಸ್.ಆರ್. ಸರೋಜ ಅವರಿಗೆ ಜಾನಪದ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ ಎಂದರು.

ಚೌಡಕಿ ಪದ ಕಲಾವಿದೆ ಕಮಲಾ ಮರಗನ್ನವರ, ಜಾನಪದ ಸಂಗೀತ ಪ್ರಭು ಬಸಪ್ಪ ಕುಂದರಗಿ, ವಿಜಯಪುರ ಡೊಳ್ಳು ಕುಣಿತ ಕಲಾವಿದ ಸೋಮಣ್ಣ ದುಂಡಪ್ಪ ಧನಗೊಂಡ, ಕರಡಿ ಮಜಲು ಗಂಗಪ್ಪ ಮ.ಕರಡಿ, ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದ ಗಣಪು ಬಡವಾ ಗೌಡ, ಸಂಪ್ರದಾಯದ ಪದ ಕಲಾವಿದೆ ಗಿರಿಜವ್ವ ಹನುಮಪ್ಪ ಬಣಕಾರ, ಹಗಲು ವೇಷ ಕಲಾವಿದ ಡಾ.ಗೋವಿಂದಪ್ಪ ರಾಮಚಂದ್ರಪ್ಪ, ತತ್ವಪದ ಕಲಾವಿದೆ ಬೋರಮ್ಮ ಅವರಿಗೆ ಜಾನಪದ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

ಜನಪದ ಗಾಯನ ಕಲಾವಿದ ಮಾರುತಿ ಕೋಳಿ, ತತ್ವಪದ ಕಲಾವಿದೆ ಯಲ್ಲಮ್ಮ, ಭಜನೆ ಕಲಾವಿದ ಎಚ್.ಚಂದ್ರಶೇಖರ್ ಹಡಪದ, ಹಗಲುವೇಷ ಕೆ.ಶಂಕರಪ್ಪ, ತತ್ವಪದ ಕಲಾವಿದ ಗೋಪಣ್ಣ ಅವರಿಗೆ ಜಾನಪದ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಿಸಿದರು.

ಮೈಸೂರಿನ ಡಾ.ಮೈಲಾಹಳ್ಳಿ ರೇವಣ್ಣ ಅವರಿಗೆ ಡಾ.ಜೀ.ಶಂ.ಪ ಪ್ರಶಸ್ತಿ ಮತ್ತು ವಿಜಯನಗರದ ಡಾ.ವೆಂಕಟೇಶ ಇಂದ್ವಾಡಿ ಅವರಿಗೆ ಡಾ.ಬಿ.ಎಸ್.ಗದ್ದಿಗೆ ಮಠ ಪ್ರಶಸ್ತಿ ಲಭಿಸಿದೆ ಎಂದರು.

ವಾರ್ಷಿಕ ಜಾನಪದ ಗೌರವ ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ 25 ಸಾವಿರ ರೂ. ಹಾಗೂ ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿಯು 50 ಸಾವಿರ ರೂ. ನಗದು ಪ್ರಶಸ್ತಿ ಮೊತ್ತದೊಂದಿಗೆ ಸ್ಮರಣಿಕೆ, ಶಾಲು, ಹಾರ, ಫಲ ತಾಂಬೂಲ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಅಕಾಡಮಿ ರಿಜಿಸ್ಟ್ರಾರ್ ಎಸ್.ನಮ್ರತ, ಸದಸ್ಯರಾದ ಡಾ.ಉಮೇಶ್, ಶಂಕ್ರಣ್ಣ ರಾಮಪ್ಪ ಸಂಕಣ್ಣನವರ, ರಂಗಪ್ಪ, ಕೆಂಕೆರೆ ಮಲ್ಲಕಾರ್ಜುನ, ಸಿ.ಎನ್.ಮಂಜೇಶ್ ಚೆನ್ನಾಪುರ, ಡಾ.ಹುಲಿಕುಂಟೆ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಮಾ.15ಕ್ಕೆ ಪ್ರಶಸ್ತಿ ಪ್ರದಾನ: 2023 ಮತ್ತು 2024ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಮಾರ್ಚ್ 15ರಂದು ಬೀದರ್ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿಗಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News