ವಾಲ್ಮೀಕಿ ನಿಗಮ ಪ್ರಕರಣ; ರಾಜ್ಯದಿಂದಾಚೆಗೆ ಸಂಚರಿಸಲು ಬಿ.ನಾಗೇಂದ್ರಗೆ ಹೈಕೋರ್ಟ್ ಅನುಮತಿ

Update: 2026-08-10 21:51 IST

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ಜಾಮೀನು ನೀಡುವಾಗ ವಿಧಿಸಲಾಗಿದ್ದ ಒಂದು ಷರತ್ತನ್ನು ಹೈಕೋರ್ಟ್ ಸಡಿಲಿಸಿದೆ.

ಪ್ರಕರಣ ಸಂಬಂಧ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ರಾಜ್ಯದ ಗಡಿ ದಾಟಿ ತೆರಳಬೇಕಾದರೆ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಷರತ್ತು ಸಡಿಲಿಸಲು ಕೋರಿ ಬಿ. ನಾಗೇಂದ್ರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಶುಕ್ರವಾರ (ಆಗಸ್ಟ್ 7) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅದಾಗ್ಯೂ, ರಾಜ್ಯ ಬಿಟ್ಟು ತೆರಳಬಾರದೆಂಬ ಷರತ್ತು ತೆರವುಗೊಂಡ ಮಾತ್ರಕ್ಕೆ ಅರ್ಜಿದಾರರು ದೇಶ ಬಿಟ್ಟು ತೆರಳಬಹುದು ಎಂದರ್ಥವಲ್ಲ. ಅರ್ಜಿದಾರರು ದೇಶದ ಗಡಿಯೊಳಗಷ್ಟೇ ಸಂಚರಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಜತೆಗೆ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, ಅರ್ಜಿದಾರರು ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿದ್ದು, ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಅಧಿಕೃತ ಕಾರ್ಯಗಳ ನಿಮಿತ್ತ ರಾಜ್ಯದಿಂದಾಚೆಗೂ ಸಂಚರಿಸುವ ಅನಿವಾರ್ಯತೆ ಇದೆ. ಆದ್ದರಿಂದ, ಜಾಮೀನು ಷರತ್ತು ಸಡಿಲಿಸಬೇಕು ಎಂದು ಕೋರಿದರು.

ದೆಹಲಿಗೆ ತೆರಳುವ ಸಲುವಾಗಿ ಜಾಮೀನು ಷರತ್ತು ಸಡಿಲಿಸುವಂತೆ ಕೋರಿ ಬಿ. ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿ. ನಾಗೇಂದ್ರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News