×
Ad

ಬೆಂಗಳೂರು : ಚಿನ್ನಾಭರಣ ಮಳಿಗೆ ಮಾಲಕನಿಗೆ ಗುಂಡು ಹಾರಿಸಿ 1 ಕೆ.ಜಿ ಆಭರಣ ದರೋಡೆ

Update: 2023-10-12 21:29 IST

ಚಿತ್ರ- ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಬೆಂಗಳೂರು, ಅ.12: ಇಲ್ಲಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಪೈಪ್‍ಲೈನ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ದುಷ್ಕರ್ಮಿಗಳು ಚಿನ್ನಾಭರಣ ಅಂಗಡಿ ಮಾಲಕನ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ವಿನಾಯಕ ಜ್ಯುವೆಲರ್ಸ್ ಅಂಗಡಿ ಮಾಲಕ ಮನೋಜ್ ಲೋಹರ್(30) ಗುಂಡೇಟಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೋಜ್ ಅವರು ಎಂದಿನಂತೆ ಅಂಗಡಿಯಲ್ಲಿ ಕುಳಿತುಕೊಂಡಿದ್ದರು. ಗುರುವಾರ ಬೆಳಗ್ಗೆ ಸುಮಾರು 10.45ರ ಸುಮಾರಿಗೆ ಈ ಘಟನೆ ನಡೆದಿದ್ದು, ನಾಲ್ವರು ದುಷ್ಕರ್ಮಿಗಳು ಎರಡು ದ್ವಿಚಕ್ರ ವಾಹನಗಳಲ್ಲಿ ಬಂದು ಆಭರಣಕೊಳ್ಳುವ ನೆಪದಲ್ಲಿ ಅಂಗಡಿಯೊಳಗೆ ಹೋಗಿ ಉಂಗುರ ತೋರಿಸುವಂತೆ ಕೇಳಿದ್ದಾರೆ.

ಮನೋಜ್ ಅವರು ಉಂಗುರಗಳನ್ನು ತೋರಿಸುವಾಗ ಇಬ್ಬರು ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು ಇನ್ನಿಬ್ಬರು ಅಂಗಡಿಯಲ್ಲಿದ್ದ ಸುಮಾರು 60 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಬಾಳುವ 1 ಕೆ.ಜಿ ಚಿನ್ನವನ್ನು ದೋಚಿದ್ದಾರೆ. ಈ ಸಮಯದಲ್ಲಿ ಮಾಲಕರು ಪ್ರತಿರೋಧ ವ್ಯಕ್ತಪಡಿಸಿದಾಗ ಅವರ ತೊಡೆಭಾಗಕ್ಕೆ ಗುಂಡು ಹಾರಿಸಿ ಚಿನ್ನಾಭರಣಗಳನ್ನು ತಮ್ಮ ಬ್ಯಾಗ್‍ನಲ್ಲಿ ತುಂಬಿಕೊಂಡು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಎಫ್‍ಎಸ್‍ಎಲ್ ತಜ್ಞರ ತಂಡಗಳು ಅಂಗಡಿಯನ್ನು ಪರಿಶೀಲಿಸಿದ್ದಾರೆ. ಅಲ್ಲದೇ, ಅಲ್ಲಿನ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನಾ ಪರಿಶೀಲಿಸಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News