ಬೆಂಗಳೂರು: ಹಣಕ್ಕಾಗಿ ಮಾಲಕನ ಬಳಿ ಅಪಹರಣದ ಕಥೆ ಕಟ್ಟಿದ್ದ ಕೆಲಸಗಾರ ಸೇರಿ ಮೂವರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.6: ಹಣಕ್ಕಾಗಿ ಮಾಲಕನಿಗೆ ಕರೆ ಮಾಡಿ ತಾನು ಅಪಹರಣಕ್ಕೊಳಗಾಗಿದ್ದು ಹಣ ನೀಡಿದರೆ ಬಿಟ್ಟು ಬಿಡುತ್ತಾರೆ ಎಂದು ಸುಳ್ಳು ಕಥೆ ಕಟ್ಟಿದ್ದ ಕೆಲಸಗಾರ ಸೇರಿ ಮೂವರನ್ನು ಇಲ್ಲಿನ ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಆರ್.ಟಿ.ನಗರದ ನಿವಾಸಿ ಮುಹಮ್ಮದ್ ಆಸೀಫ್ ಹಬೀಬ್ ಎಂಬುವರು ನೀಡಿದ ದೂರಿನ ಮೇರೆಗೆ ಬಿಹಾರ ಮೂಲದ ನೂರುಲ್ಲಾ ಹಸನ್, ಅಬೂಬುಕರ್ ಹಾಗು ಆಲಿರೇಜಾ ಎಂಬುವರನ್ನು ಬಂಧಿಸಲಾಗಿದೆ.
ಪ್ರಕರಣ ಕುರಿತು ಮಾಹಿತಿ ನೀಡಿದ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್, ದೂರುದಾರ ಆಸೀಫ್ ಹಬೀಬ್ ತಂದೆ ಆರ್.ಟಿ.ನಗರದಲ್ಲಿ ಕಾರ್ಖಾನೆಯೊಂದರ ಮಾಲಕರಾಗಿದ್ದು, ನೂರುಲ್ಲಾ ಹಸನ್ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಸೆ.26 ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ ಆರೋಪಿ ನೂರುಲ್ಲಾ, ಅಂದು ರಾತ್ರಿ 10 ಗಂಟೆಗೆ ಮಾಲಕರಿಗೆ ಕರೆ ಮಾಡಿ ಯಾರೋ ವ್ಯಕ್ತಿಗಳು ತನ್ನನ್ನು ಅಪಹರಿಸಿದ್ದಾರೆ. 2 ಲಕ್ಷ ರೂ. ನೀಡಿದರೆ ಬಿಟ್ಟು ಕಳುಹಿಸುತ್ತಾರೆ. ಹೀಗಾಗಿ ತನ್ನ ಬ್ಯಾಂಕ್ ಖಾತೆಗೆ 2 ಲಕ್ಷ ರೂ. ಹಣ ನೀಡುವಂತೆ ಹೇಳಿದ್ದ. ಅದಕ್ಕೆ ಮಾಲಕರು ನೂರುಲ್ಲಾಗೆ 2 ಲಕ್ಷ ರೂ. ಹಣ ನೀಡುತ್ತೇನೆ. ಆದರೆ, ನಿನ್ನ ಬ್ಯಾಂಕ್ ಖಾತೆಗೆ ಕಳುಹಿಸುವ ಬದಲು ಅಪಹರಣಕಾರರ ಬ್ಯಾಂಕ್ ಖಾತೆ ಸಂಖ್ಯೆ ನೀಡುವಂತೆ ಹೇಳಿದ್ದರು. ಇದಕ್ಕೊಪ್ಪದ ನೂರುಲ್ಲಾ ತನ್ನ ಖಾತೆಗೆ ಹಣ ಕಳಿಸಬೇಕೆಂದು ಹೇಳಿದ್ದ. ಅನುಮಾನಗೊಂಡ ಮಾಲಕರು ಪೊಲೀಸರಿಗೆ ವಿಷಯ ತಿಳಿಸಿದ್ದರು ಎಂದು ಡಿಸಿಪಿ ಸೈದುಲು ಅಡಾವತ್ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಆರ್.ಟಿ.ನಗರ ಠಾಣೆಯ ಪೊಲೀಸರು, ಆರೋಪಿಯ ಮೊಬೈಲ್ ನೆಟ್‍ವರ್ಕ್ ಬಗ್ಗೆ ಜಾಲಾಡಿದಾಗ ಮಂಡ್ಯದಲ್ಲಿರುವುದು ಗೊತ್ತಾಗಿತ್ತು. ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ ಮೂವರನ್ನು ವಶಕ್ಕೆ ಪಡೆದ ಮಂಡ್ಯ ಪೊಲೀಸರು ಆರೋಪಿಗಳನ್ನು ಆರ್.ಟಿ.ನಗರ ಪೊಲೀಸರಿಗೆ ಸುಪರ್ದಿಗೆ ಒಪ್ಪಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.