ಬೆಂಗಳೂರು ವಿವಿಯಲ್ಲಿ ದಲಿತ ತಾರತಮ್ಯ ಆರೋಪ | ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ 10 ಮಂದಿ ಪ್ರಾಧ್ಯಾಪಕರಿಂದ ಕುಲಪತಿಗೆ ಪತ್ರ
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದಲಿತ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಹತ್ತು ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾಧ್ಯಾಪಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ವಿವಿಯ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ.
ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಿ.ಸೋಮಶೇಖರ್, ಬಾಬು ಜಗಜೀವನರಾಂ ಸಂಶೋಧನಾ ಕೇಂದ್ರದ ಪ್ರೊ. ವಿಜಯಕುಮಾರ್ ಎಚ್. ದೊಡ್ಡಮನಿ, ವಿದ್ಯಾರ್ಥಿಗಳ ಕಲ್ಯಾಣ ನಿರ್ದೇಶಕ ಪ್ರೊ.. ನಾಗೇಶ್ ಪಿ.ಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೋಶದ ವಿಶೇಷಾಧಿಕಾರಿ ಪ್ರೊ.. ಕೃಷ್ಣಮೂರ್ತಿ ಜಿ, ಪಿಎಂ-ಉಷಾ ಸಂಯೋಜನಕ ಪ್ರೊ.. ಸುದೇಶ್ ವಿ, ದೂರ ಮತ್ತು ಆನ್‍ಲೈನ್ ಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ.. ಮುರಳೀಧರ ಬಿ.ಎಲ್. ಮಾಳವೀಯ ಶಿಕ್ಷಕರ ತರಬೇತಿ ಸಂಸ್ಥೆ ನಿರ್ದೇಶಕ ಪ್ರೊ.. ಶಶಿಧರ್ ಎಂ., ಪ್ರಸಾರಾಂಗ ನಿರ್ದೇಶಕ ಪ್ರೊ.. ರಮೇಶ, ಸಮಾನ ಅವಕಾಶ ಕೋಶದ ನಿರ್ದೇಶಕ ಡಾ. ಸುರೇಶ್ ಆರ್, ಬ್ರೇಲ್ ಸೆಂಟರ್ ನಿರ್ದೇಶಕ ಡಾ. ಕುಂಬಿನರಸಯ್ಯ ಎಸ್. ಪತ್ರಕ್ಕೆ ಸಹಿ ಹಾಕಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುಮಾರು ವರ್ಷಗಳಿಂದ ದಲಿತ ಶಿಕ್ಷಕರು ತಮ್ಮ ಶೈಕ್ಷಣಿಕ ಜವಾಬ್ದಾರಿ ಹೊರತುಪಡಿಸಿ, ಹಲವಾರು ಆಡಳಿತ ಹುದ್ದೆಗಳ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಾ ಆಡಳಿತ ವರ್ಗಕ್ಕೆ ಹೊರೆಯನ್ನು ಕಡಿಮೆಗೊಳಿಸಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಶಾಸನಬದ್ಧ ಹುದ್ದೆಗಳ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯದ ಬಹುಸಂಖ್ಯಾತ ದಲಿತರಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.
ನಮಗೆ ನೀಡಿದ ಎಲ್ಲ ಹಚ್ಚುವರಿ ಜವಾಬ್ದಾರಿಯನ್ನು ಕೇವಲ ಉಸ್ತುವಾರಿ ಎಂದು ಆದೇಶ ನೀಡಿ, ಈ ಜವಾಬ್ದಾರಿಗಳಿಗೆ ಈ ಹಿಂದೆ ಅನುಸರಿಸಿದಂತೆ ಸಹಜವಾಗಿ ನಮ್ಮ ಖಾತೆಗಳಿಗೆ ಸಂದಾಯವಾಗಬೇಕಿದ್ದ ಇಎಲ್‍ಅನ್ನು ತಪ್ಪಿಸುವ ವ್ಯವಸ್ಥೆ ನಡೆದಿದೆ. ಈ ಬಗ್ಗೆ ನಮ್ಮ ಹಿಂದಿನ ಮನವಿಗಳಿಗೆ ಆಡಳಿತ ವರ್ಗದಿಂದ ಯಾವುದೇ ರೀತಿಯ ಮನ್ನಣೆ ದೊರೆಯುತ್ತಿರುವುದಿಲ್ಲ. ಆದುದರಿಂದ ನಮ್ಮ ಬೇಡಿಕೆಗೆ ಕೂಡಲೇ ಪುರಸ್ಕಾರ ನೀಡದಿದ್ದಲ್ಲಿ ನಮ್ಮ ಜವಾಬ್ದಾರಿಗಳಿಗೆ ನಾವು ರಾಜೀನಾಮೆ ಸಲ್ಲಿಸಿದ್ದೇವೆಂದು ಭಾವಿಸಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿದ್ದಾರೆ.