×
Ad

ಕಳಪೆ ಮಾತ್ರೆ ಪೂರೈಕೆ; ಔಷಧ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದ ಕೆ‌ಎಸ್ಎಂಎಸ್‌ಸಿ‌ಎಲ್ ಕ್ರಮ ಎತ್ತಿಹಿಡಿದ ಹೈಕೋರ್ಟ್

Update: 2026-06-14 00:14 IST

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಕಳಪೆ ಔಷಧ ಪೂರೈಸಿ, ನಿಯಮಾವಳಿ ಪ್ರಕಾರ ಅವುಗಳನ್ನು ಬದಲು ಮಾಡಿಕೊಡದ ಔಷಧ ಕಂಪನಿಯೊಂದನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದ್ದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (ಕೆಎಸ್ಎಂಎಸ್‌ಸಿಎಲ್) ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕಳಪೆ ಮಾತ್ರೆಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ 3 ವರ್ಷದ ಅವಧಿಗೆ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿ ಹೊರಡಿಸಲಾಗಿದ್ದ ಆದೇಶ ಪ್ರಶ್ನಿಸಿ ಜೈಪುರದ 'ಬಯೊ ಜೆನೆಟಿಕ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್'ನ ಪ್ರತಿನಿಧಿ ಪುಷ್ಕರ ದೇವ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಬಡ ರೋಗಿಗಳಿಗೆ ಗುಣಮಟ್ಟದ ಔಷಧ ಪೂರೈಸುವುದು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸುವುದು ಕೆಎಸ್‌ಎಂ‌ಎಸ್‌ಸಿಎಲ್‌ನ ಆದ್ಯ ಕರ್ತವ್ಯ. ಔಷಧ ಕಳಪೆ ಎಂದು ಸಾಬೀತಾದ ನಂತರವೂ ಅದನ್ನು ಬದಲಿಸಿಕೊಡದ ಕಂಪನಿಯ ನಡೆ ಸಮರ್ಥನೀಯವಲ್ಲ. ಆದ್ದರಿಂದ, ನಿಗಮದ ಆದೇಶದಲ್ಲಿ ಯಾವುದೇ ಕಾನೂನುಬಾಹಿರ ವರ್ತನೆ ಕಂಡುಬಂದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?

ಅರ್ಜಿದಾರ ಕಂಪನಿ 2023ರಲ್ಲಿ ಕೆಎಸ್‌ಎಂಎಸ್‌ಸಿಎಲ್‌ ಪ್ರಕಟಿಸಿದ್ದ ಟೆಂಡರ್‌ನಲ್ಲಿ ಭಾಗವಹಿಸಿ ಸುಮಾರು 46.45 ಲಕ್ಷ ರೂ. ಮೌಲ್ಯದ ಔಷಧ ಸರಬರಾಜು ಮಾಡಿತ್ತು. ಮಾತ್ರೆಗಳನ್ನು ಔಷಧ ನಿಯಂತ್ರಣ ಇಲಾಖೆಯ ಮೂಲಕ ಪರೀಕ್ಷೆಗೆ ಒಳಪಡಿಸಿದಾಗ ಅವು ಕಳಪೆಯಾಗಿವೆ ಎಂಬ ಅಂಶ ಕಂಡು ಬಂದ ಕಾರಣ ಕಂಪನಿಯನ್ನು 3 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿ 2025ರ ಮಾರ್ಚ್ 28ರಂದು ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News