ಜೀವ ಬೆದರಿಕೆ ಆರೋಪ: ಡಿಜಿ-ಐಜಿಪಿಗೆ ಬಿಗ್‍ಬಾಸ್ ಸ್ಪರ್ಧಿ ರಜತ್ ದೂರು
ರಜತ್
ಬೆಂಗಳೂರು, ಆ.7: ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕನ್ನಡ ಬಿಗ್‍ಬಾಸ್ ಸ್ಪರ್ಧಿ ರಜತ್ ಮತ್ತು ಅವರ ಪತ್ನಿ ಅಕ್ಷತಾ ದಂಪತಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಗುರುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಭೇಟಿ ನೀಡಿ ದೂರು ಸಲ್ಲಿಸಿದ ದಂಪತಿ, ಶಾರದಾ ಭಟ್ ಎಂಬವರು ಫೇಸ್‍ಬುಕ್‍ನಲ್ಲಿ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ : ಸೌಜನ್ಯಾಳ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಲು ಧರ್ಮಸ್ಥಳದ ಸೌಜನ್ಯಾಳ ನಿವಾಸಕ್ಕೆ ಆ.6ರಂದು ಬಿಗ್‍ಬಾಸ್ ಸ್ಪರ್ಧಿ ರಜತ್ ಹಾಗೂ ಅವರ ಪತ್ನಿ ಅಕ್ಷತಾ ಭೇಟಿ ನೀಡಿದ್ದ ವೇಳೆಯಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ಯುಟ್ಯೂಬರ್‍ಗಳ ಮೇಲೆ ಕೆಲ ದುಷ್ಕರ್ಮಿಗಳಿಂದ ಹಲ್ಲೆ ನಡೆದಿತ್ತು.
ಈ ಘಟನೆ ಸಂಬಂಧ ಶಾರದಾ ಭಟ್ ಎಂಬುವರು ಫೇಸ್‍ಬುಕ್‍ನಲ್ಲಿ ‘ಬಿಗ್ ಬಾಸ್ ರಜತ್ ಅವರ ಪತ್ನಿ ಹೆಸರು ಅಕ್ಷತಾ. ಇವರು ರಜತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ, ಒಂದು ಗಂಡು ಮತ್ತು ಒಂದು ಹೆಣ್ಣು. ಗಂಡ ಬೇಕು ಅಂದರೆ ರಿಟರ್ನ್ ಕರೆಯಿಸಿಕೊಳ್ಳಿ. ಅಕ್ಷತಾ ಅವರೇ…ಇದು ಮಂಡ್ಯ ಅಲ್ಲ, ಕರಾವಳಿ’ ಎಂದು ಬೆದರಿಕೆ ಪೋಸ್ಟ್ ಹಾಕಿದ್ದರು.
ನಾವು ಧರ್ಮಸ್ಥಳಕ್ಕೆ ಸೌಜನ್ಯ ಮನೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ನ್ಯಾಯ ಕೇಳಲು ಹೋಗಿದ್ದೆವು. ಯಾವುದೇ ಜಾತಿ, ಧರ್ಮ, ದೇವಸ್ಥಾನದ ಬಗ್ಗೆ ನಾವು ಮಾತನಾಡಿಲ್ಲ. ಹಾಡಹಗಲೇ ನಮ್ಮ ಕಣ್ಣ ಮುಂದೆ ಗಲಾಟೆ ನಡೆದಿದೆ. ಹಲ್ಲೆ ಮಾಡಿದವರ ವಿರುದ್ಧ ಮತ್ತು ಬೆದರಿಕೆ ಸಂದೇಶ ಕಳುಹಿಸಿದವರ ವಿರುದ್ಧ ದೂರು ಕೊಟ್ಟಿದ್ದೇವೆ. ನಾವು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ರಜತ್ ತಿಳಿಸಿದ್ದಾರೆ.