×
Ad

ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನ ಮಂಪರು ಪರೀಕ್ಷೆಗೆ ಬಿಜೆಪಿ ಒತ್ತಾಯ

Update: 2025-08-18 21:00 IST

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ದೂರುದಾರನ ಮಂಪರು ಪರೀಕ್ಷೆ ಮಾಡಬೇಕೆಂದು ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಶವ ಹೂತಿದ್ದೇನೆಂದು ಹೇಳಿಕೆ ನೀಡಿರುವ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಲು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ಬಳಿ 13 ಸ್ಥಳಗಳಲ್ಲಿ ಶವ ಹೂತು ಹಾಕಿರುವ ಬಗ್ಗೆ ಅನಾಮಿಕ ದೂರು ನೀಡಿದ ಮೇರೆಗೆ ರಾಜ್ಯ ಸರಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ದೂರುದಾರನು ಗುರುತಿಸಿದ 13 ಸ್ಥಳಗಳಲ್ಲಿ ಕಳೇಬರವನ್ನು ಪತ್ತೆ ಹಚ್ಚುವ ಸಲುವಾಗಿ ಅಗೆಯಲು ಗುರುತಿಸಿದ 6ನೇ ಸ್ಥಳದಲ್ಲಿ ಮಾತ್ರ ಪುರುಷನ ಕಳೇಬರ ದೊರಕಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಜಿಪಿಆರ್ ಪ್ರಯೋಗಿಸಿದರೂ ಕೂಡ ಮಿಕ್ಕಿದ ಯಾವ ಸ್ಥಳದಲ್ಲೂ ಕಳೇಬರದ ಕುರುಹು ಸಿಕ್ಕಿರುವುದಿಲ್ಲ. ಈ ಅನಾಮಿಕ ವ್ಯಕ್ತಿಯು ದೂರು ನೀಡಿದ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅನಾಮಿಕನಿಗೆ ಮಂಪರು ಪರೀಕ್ಷೆ ಮಾಡಿ ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದರು ಎಂಬ ಮಾಹಿತಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಆದರೆ ಈವರೆಗೆ ಆತನಿಗೆ ಮಂಪರು ಪರೀಕ್ಷೆ ನಡೆಸಿಲ್ಲ ಎಂದು ಕಿಶೋರ್ ಕುಮಾರ್ ಪುತ್ತೂರು ತಿಳಿಸಿದರು.

ಮೊದಲಿಗೆ ಯಾವುದೇ ಕಾರಣಕ್ಕೂ ಧರ್ಮಸ್ಥಳ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವುದಿಲ್ಲ ಎಂದು ಮಾಧ್ಯಮ ಪ್ರಕಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಮರುದಿನವೇ ತರಾತುರಿಯಲ್ಲಿ ಎಸ್‍ಐಟಿ ರಚಿಸಿದ ಹಿಂದಿರುವ ಕಾರಣವೇನು? ಇದರಿಂದ ಸರಕಾರವು ಹಿಂದೂ ವಿರೋಧಿಯಾಗಿ ಎಡಪಂಥೀಯರ ಒತ್ತಡಕ್ಕೆ ಮಣಿದಿರುವುದು ನಮಗೆ ಸ್ಪಷ್ಟ ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News