ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಎಂಎಲ್‌ಸಿ
ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್
ಬೆಂಗಳೂರು: ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಅವರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಅವಹೇಳನಕಾರಿಯಾಗಿ ಟೀಕಿಸುವ ಮೂಲಕ ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ.
"ಮುಖ್ಯ ಕಾರ್ಯದರ್ಶಿ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ" ಎಂದು ರವಿ ಕುಮಾರ್ ಅವರು ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅವಹೇಳನಕಾರಿಯಾಗಿ ಹೇಳಿದ್ದಾರೆ ಎಂದು India Today ವರದಿ ಮಾಡಿದೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಉಪ ಪೊಲೀಸ್ ಆಯುಕ್ತ (ವಿಧಾನಸೌಧ ಭದ್ರತೆ) ಎಂಎನ್ ಕರಿಬಸವನ ಗೌಡ ಅವರೊಂದಿಗೆ ಮಾತನಾಡುತ್ತಿರುವಾಗ ಈ ಹೇಳಿಕೆ ನೀಡಲಾಗಿದ್ದು, ವೈರಲ್ ಆದ ವೀಡಿಯೊದಲ್ಲಿ, ಎಂಎಲ್‌ಸಿ ರವಿಕುಮಾರ್ ಈ ಹೇಳಿಕೆಗೆ ಡಿಸಿಪಿ ಕರಿಬಸವನ ಗೌಡ ಅವರೂ ನಗುತ್ತಿರುವಂತೆ ಕಂಡು ಬಂದಿದೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಇದು ವಿಚಿತ್ರವಲ್ಲ, ಅದು ಅವರ ಮನಸ್ಥಿತಿ ಮತ್ತು ಯೋಚನೆಯೇ ಹಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಶಾಖೆಗಳಲ್ಲಿ ಇದನ್ನೇ ಕಲಿಸಲಾಗುತ್ತದೆ. ಅವರು ಆರೆಸ್ಸೆಸ್ ವ್ಯಕ್ತಿ. ಈ ಜನರು ಸ್ವಂತವಾಗಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಅವರು ಜನರ ಜನಪ್ರಿಯ ಆಯ್ಕೆಯಲ್ಲ, ಅವರನ್ನು ಆರೆಸ್ಸೆಸ್ ಬಿಜೆಪಿಗೆ ತಳ್ಳುತ್ತದೆ. ಮನುಸ್ಮೃತಿಯಿಂದ ಪ್ರೇರಿತವಾದ ಈ ಸಿದ್ಧಾಂತವನ್ನು ಆರೆಸ್ಸೆಸ್ ಶಾಖೆಗಳಲ್ಲಿ ಅವರಿಗೆ ಕಲಿಸಲಾಗುತ್ತದೆ" ಎಂದು ಕಿಡಿ ಕಾರಿದ್ದಾರೆ.
ರವಿಕುಮಾರ್ ಈ ಹಿಂದೆಯೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದರು. ಮೇ 24 ರಂದು ಕಲಬುರಗಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ರವಿಕುಮಾರ್, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ರಾಷ್ಟ್ರೀಯತೆಯನ್ನು ಪ್ರಶ್ನಿಸಿ ಕೋಮುವಾದಿ ಉಲ್ಲೇಖವನ್ನು ಮಾಡಿದ್ದರು.