×
Ad

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸಲು ಆದೇಶ : ಪ್ರಿಯಾಂಕ್ ಖರ್ಗೆ

Update: 2025-12-20 19:02 IST

ಬೆಂಗಳೂರು : 2025-26 ನೇ ಸಾಲಿನ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸಲು ಆದೇಶ ಹೊರಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ಜಿಲ್ಲಾಧಿಕಾರಿಯೊಂದಿಗೆ ನಡೆಸಿದ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯಲ್ಲಿ, ಬೆಂಬಲ ಬೆಲೆ ಯೋಜನೆಯಡಿ ತೊಗರಿ ಪ್ರತಿ ಕ್ವಿಂಟಾಲ್‍ಗೆ 8 ಸಾವಿರ ರೂ. ದರದಲ್ಲಿ ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಿರುವಂತೆ ರೈತರು ತೊಗರಿ ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ತೊಗರಿಯನ್ನು ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಸರಕಾರದ ಆದೇಶದಂತೆ ಕಲಬುರಗಿ ಜಿಲ್ಲೆಗೆ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಲು ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಯನ್ನು ರಾಜ್ಯ ಖರೀದಿ ಸಂಸ್ಥೆಗಳಾಗಿ ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 141 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಎಫ್.ಪಿ.ಒ ಗಳ ಮೂಲಕ ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ಪಿಓಎಸ್ ಯಂತ್ರಗಳಲ್ಲಿ ರೈತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಯುಐಡಿಎಐ ಬಯೋ ಮೆಟ್ರಿಕ್ ಪಡೆಯುವುದು ಕಡ್ಡಾಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, 2026ರ ಮಾ.6ರವರೆಗೆ ಮುಂದುವರಿಯಲಿದೆ. ರೈತರಿಂದ ಖರೀದಿಸಿದ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಪೋರ್ಟಲ್ ಮೂಲಕ ಪಾವತಿಸಲಾಗುವುದು. ಬೆಂಬಲ ಬೆಲೆ ದರಕ್ಕಿಂತ ಹೆಚ್ಚಿನ ಮಾರುಕಟ್ಟೆ ಧಾರಣೆ ಇದ್ದಲ್ಲಿ, ನಾಫೆಡ್ ಸಂಸ್ಥೆಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಇ-ಆಕ್ಷನ್ ಪೋರ್ಟಲ್ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಬಫರ್ ಸ್ಟಾಕ್ ಉದ್ದೇಶಕ್ಕಾಗಿ ನೋಂದಾಯಿತ ರೈತರಿಂದ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರದಲ್ಲಿ ಖರೀದಿ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯ ರೈತ ಬಾಂಧವರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಂಡು, ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಎಫ್.ಪಿ.ಓ ಗಳಿಗೆ ಮತ್ತು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ತೊಗರಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿಯನ್ನು ನಿಗದಿತ ಅವಧಿಯಲ್ಲಿ ಮಾರಾಟಕ್ಕೆ ನೋಂದಾಯಿಸಿಕೊಂಡು ಮಾರಾಟ ಮಾಡಬೇಕೆಂದು ಅವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಫೋನ್ ಸಂಖ್ಯೆಗಳನ್ನು ಸಂಪರ್ಕಿಸಿ. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಲಬುರಗಿ: ಮೊಬೈಲ್ ಸಂಖ್ಯೆ 9449864446, ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ: ಮೊಬೈಲ್ ಸಂಖ್ಯೆ 9964474444 ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News