ʼಅಸಮರ್ಥರನ್ನು ಅಸಮರ್ಥ ಎನ್ನದೆ ಜಗದೇಕ ವೀರ ಎನ್ನಬೇಕೆ?ʼ : ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
"ಬಾಂಗ್ಲಾ ವಲಸಿಗರು ದೇಶದ ಗಡಿ ದಾಟಿ ಬರುವಂತಾಗಿದ್ದು ಕೇಂದ್ರ ಗೃಹ ಸಚಿವರ ವೈಫಲ್ಯವಲ್ಲವೇ?"
ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು : ಅಸಮರ್ಥರನ್ನು ಅಸಮರ್ಥ ಎನ್ನದೆ ಜಗದೇಕ ವೀರ ಎನ್ನಬೇಕೆ ಎಂದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಶನಿವಾರ ಈ ಸಂಬಂಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಬಾಂಗ್ಲಾ ವಲಸಿಗರ ಬಗ್ಗೆ ಅತಾರ್ಕಿಕವಾಗಿ ರಾಜ್ಯ ಸರಕಾರವನ್ನು ಟೀಕಿಸುವ ಬಿಜೆಪಿಗರಿಗೆ, ಬಾಂಗ್ಲಾ ವಲಸಿಗರು ದೇಶದೊಳಗೆ ನುಸುಳುವಂತಾಗಿದ್ದು ಹೇಗೆ ಮತ್ತು ಯಾರ ಅಸಾಮರ್ಥ್ಯದಿಂದ ಎಂಬ ಪ್ರಶ್ನೆಗೆ ಉತ್ತರ ಹೇಳುವ ಧೈರ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾ ವಲಸಿಗರು ದೇಶದ ಗಡಿ ದಾಟಿ ಬರುವಂತಾಗಿದ್ದು ಕೇಂದ್ರ ಗೃಹ ಸಚಿವರ ವೈಫಲ್ಯವಲ್ಲವೇ?, ದಿಲ್ಲಿಯ ಕೆಂಪು ಕೋಟೆ ಬಳಿಯೆ ಸ್ಫೋಟವಾಗುತ್ತದೆ ಎಂದರೆ ಅದು ಕೇಂದ್ರ ಗೃಹ ಸಚಿವರ ಅಸಾಮರ್ಥ್ಯವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ದಾಳಿಯಾಗುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಾಣಾಕ್ಷತನ ಎಲ್ಲಿ ಅಡಗಿತ್ತು? ವರ್ಷಗಳ ಕಾಲ ಮಣಿಪುರದಲ್ಲಿ ದಂಗೆ ನಡೆಯುತ್ತಿದ್ದುದ್ದನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದನ್ನು ಅಸಾಮರ್ಥ್ಯ ಎನ್ನಬೇಕೋ ಅಥವಾ ಪರಾಕ್ರಮ ಎನ್ನಬೇಕೋ? ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಮಹಿಳೆಯರ ಬೆತ್ತಲೆ ಮೆರವಣಿಗೆಯಿಂದ ಇಡೀ ಜಗತ್ತಿನ ಎದುರು ದೇಶದ ಘನತೆ ಮಣ್ಣುಪಾಲಾದಾಗ ಕಣ್ಮುಚ್ಚಿ ಕುಳಿತಿದ್ದು ಅಸಾಮರ್ಥ್ಯವಲ್ಲದೆ ಇನ್ನೇನು?, ಅಮಿತ್ ಶಾ ಅವರ ಸಾಮರ್ಥ್ಯ, ಪರಾಕ್ರಮಗಳಿರುವುದು ಬಿಜೆಪಿಯೇತರ ಸರಕಾರಗಳನ್ನು ಉರುಳಿಸುವುದರಲ್ಲಿ ಮತ್ತು ಐಸಿಸಿಯನ್ನು ಸಮೃದ್ಧಗೊಳಿಸುವುದರಲ್ಲಿ ಮಾತ್ರವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಮೋಷನ್‍ಗಾಗಿ, ಅಸ್ತಿತ್ವಕ್ಕಾಗಿ ಅಮಿತ್ ಶಾ ಅವರನ್ನು ಸ್ಪರ್ಧೆಗೆ ಬಿದ್ದವರಂತೆ ಸಮರ್ಥಿಸಿಕೊಳ್ಳುವುದು ರಾಜ್ಯದ ಬಿಜೆಪಿ ನಾಯಕರಿಗೆ ಅನಿವಾರ್ಯ ಎಂಬ ಸಂಗತಿ ನಮಗೂ ತಿಳಿದಿದೆ, ಜನತೆಗೂ ತಿಳಿದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಹಾತ್ಮ ಗಾಂಧಿ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ದೇಶ ಕಟ್ಟಿದ ನಾಯಕರ ಬಗ್ಗೆಯೇ ಅಸಂಸದೀಯ ಭಾಷೆಯ ಮೂಲಕ ನಾಲಿಗೆ ಹರಿಬಿಡುವ ರಾಜ್ಯ ಬಿಜೆಪಿ ನಾಯಕರು ಇಂದು “ಅಸಮರ್ಥ“ ಎಂಬ ಪದವನ್ನು ಸಹಿಸಲಾಗದೆ ಒದ್ದಾಡುತ್ತಿರುವುದು ಅವರ ಶೋಚನಿಯ ಸ್ಥಿತಿಗೆ ಹಿಡಿದ ಕನ್ನಡಿ ಎಂದು ಅವರು ವ್ಯಂಗ್ಯವಾಡಿದ್ದಾರೆ.