×
Ad

ಕಲಾಪಕ್ಕೆ ಸಚಿವರ ಗೈರು: ಬಿಜೆಪಿ ಸದಸ್ಯರ ಆಕ್ಷೇಪ

Update: 2026-01-27 23:51 IST

ಬೆಂಗಳೂರು: ‘ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ನೀಡಬೇಕಾದ ಸಂಬಂಧಪಟ್ಟ ಸಚಿವರೇ ಹಾಜರಿಲ್ಲದ್ದರೆ ವಿಧಾನಸಭೆ ಅಧಿವೇಶನವನ್ನು ಕರೆಯುವುದಾದರೂ ಏಕೆ?’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.

ಮಂಗಳವಾರ ವಿಧಾನಸಭೆ ಕಲಾಪ ಆರಂಭಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು, ಪ್ರಶ್ನೆ ಕೇಳಬೇಕಾದ ಸದಸ್ಯರ ಹೆಸರನ್ನು ಕರೆದರು. ಆಗ ಸಂಬಂಧಪಟ್ಟ ಸಚಿವರು ಇರಲಿಲ್ಲ, ಇದನ್ನು ಗಮನಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಸಚಿವರೇ ಇಲ್ಲ ಎಂದರೆ ಹೇಗೆ?, ಕನಿಷ್ಟ ಜವಾಬ್ದಾರಿ ಬೇಡವೇ? ಇಂದು ಸದನದಲ್ಲಿ ಹಾಜರಿರಬೇಕಾದ ಹೆಸರುಗಳನ್ನು ಹೇಳಿ, ಸದನಕ್ಕೆ ಗೈರುಹಜರಾಗಿರುವವರಿಗೆ ಛೀಮಾರಿ ಹಾಕಿ’ ಎಂದು ಸಲಹೆ ನೀಡಿದರು.

ಆಗ ಸ್ಪೀಕರ್ ಖಾದರ್, ಈ ಸಂದರ್ಭದಲ್ಲಿ ಅದೆಲ್ಲ ಏಕೆ, ಸದನ ಆರಂಭವಾಗಿದೆ?. ಹಾಜರಾತಿ ಏಕೆ ಕಡಿಮೆ ಇದೆ ಎಂಬುದು ನಿಮಗೆ ಗೊತ್ತಿದೆ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದರು. ಅದಕ್ಕೆ ಅಶೋಕ್ ಇಂದು ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಒಮ್ಮೆ ಓದಿ ಎಂದು ಒತ್ತಾಯಿಸಿದರು.

ಬಳಿಕ ಸ್ಪೀಕರ್ ಖಾದರ್, ಇಂದು ಸದನದಲ್ಲಿ ಮುಖ್ಯಮಂತ್ರಿ, ಡಿಸಿಎಂ ಪರವಾಗಿ ಸಚಿವರು ಉತ್ತರ ಕೊಡುತ್ತಾರೆ. ಸದನದ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ಸಚಿವರು ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ಹಾಜರಿರುವ ಬಗ್ಗೆ ಹೇಳಲಾಗಿದೆ. ಅದರಂತೆ ಬರುತ್ತಾರೆ. ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಡಾ.ಎಚ್.ಸಿ.ಮಹದೇವಪ್ಪ, ಎಂ.ಸಿ.ಸುಧಾಕರ್, ಝಮೀರ್ ಅಹ್ಮದ್ ಖಾನ್ ಅವರ ಹೆಸರನ್ನು ಉಲ್ಲೇಖಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಸುನೀಲ್ ಕುಮಾರ್, ‘ಇದು ಇಲ್ಲಗಳ ಸರಕಾರ, ಸದನದಲ್ಲಿ ಮಂತ್ರಿಗಳಿಲ್ಲ, ಶಾಸಕರಿಗೆ ಅನುದಾನವೂ ಇಲ್ಲ’ ಎಂದು ಛೇಡಿಸಿದರು. ಕಂದಾಯ ಸಚಿವ ಕೃಷ್ಣ ಭೈರೇಗೌಡ, ‘ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್, ಸಣ್ಣ ನೀರಾವರಿ ಸಚಿವ ಭೋಸರಾಜ್ ಸೇರಿದಂತೆ ಇನ್ನಿತರರು ಇದ್ದೇವೆ, ನಾವು ಉತ್ತರ ನೀಡುತ್ತೇವೆ, ಪ್ರಶ್ನೋತ್ತರ ಆರಂಭಿಸಿ’ ಎಂದು ಮನವಿ ಮಾಡಿದರು.

ಆಗ ಸ್ಪೀಕರ್ ಖಾದರ್ ಅವರು, ಬಿಜೆಪಿ ಸದಸ್ಯ ಎಚ್‍ಕೆ.ಸುರೇಶ್ ಅವರನ್ನು ಪ್ರಶ್ನೆ ಕೇಳುವಂತೆ ಆಹ್ವಾನಿಸಿದರು. ಆದರೆ, ಅವರು ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಲಿಲ್ಲ. ಇದನ್ನು ಗಮನಿಸಿದ ಸ್ಪೀಕರ್ ನಿಮ್ಮ ಪಕ್ಷದ ಸದಸ್ಯರೂ ಸದನಕ್ಕೆ ಇನ್ನೂ ಬಂದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ನಮ್ಮ ಪಕ್ಷದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆಡಳಿತ ಪಕ್ಷದ ಸಾಲಿನಲ್ಲಿ ಕುರ್ಚಿ ಖಾಲಿ ಇವೆ’ ಎಂದು ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News