ಕೇಂದ್ರದ ‘ವಿಬಿ-ಜಿ ರಾಮ್ ಜೀ ಕಾಯ್ದೆ’ ವಿರೋಧಿಸಿ ಬೀದಿಗಿಳಿದ ಕಾಂಗ್ರೆಸ್; ಕಾಯ್ದೆ ರದ್ದತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಬೆಂಗಳೂರು: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ‘ವಿಬಿ-ರಾಮ್-ಜಿ ಕಾಯ್ದೆ’ ರದ್ದು ಮಾಡುವುದು ಮಾತ್ರವಲ್ಲದೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ(ಮನರೇಗಾ) ಯೋಜನೆಯನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಧರಣಿ ಸತ್ಯಾಗ್ರಹ ಹಾಗೂ ‘ಲೋಕಭವನ ಚಲೋ’ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಸಚಿವರಾದ ಕೆ.ಜೆ.ಜಾರ್ಜ್, ಚೆಲುವರಾಯ ಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ, ದಿನೇಶ್ ಗೂಂಡುರಾವ್, ಡಾ.ಶರಣಪ್ರಕಾಶ್ ಪಾಟೀಲ್, ಎನ್.ಎಸ್.ಭೋಸರಾಜು, ಶಿವರಾಜ್ ತಂಗಡಗಿ, ಕೆ.ಎಚ್.ಮುನಿಯಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ್ ಸೇರಿದಂತೆ ಪ್ರಮುಖರು ಪಾಲ್ಗೊಂಡು ಕೇಂದ್ರ ಸರಕಾರದ ನೀತಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಅನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದ ಕಾಂಗ್ರೆಸ್ ಪಕ್ಷದ ನಿಯೋಗವು ಬಸ್ ಮೂಲಕ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಮನರೇಗಾ ಯೋಜನೆ ಮರು ಜಾರಿ ಸಂಬಂಧ ವಿವರಿಸಿದರು.
ಮನರೇಗಾ ಕಾಯ್ದೆ ನಮ್ಮ ಹೃದಯಕ್ಕೆ ಹತ್ತಿರವಾಗಿರುವ ಕಾನೂನು. ರಾಜ್ಯದ ಸುಮಾರು 5700 ಪಂಚಾಯಿತಿಗಳಲ್ಲಿ ಪ್ರತಿ ವರ್ಷ ಈ ಯೋಜನೆಯಿಂದ 6 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದವು. ಇದರಲ್ಲಿ ಶೇ.90ರಷ್ಟು ಅನುದಾನವನ್ನು ಕೇಂದ್ರ ಸರಕಾರ ಭರಿಸುತ್ತಿತ್ತು. ಪ್ರತಿ ಪಂಚಾಯಿತಿಗಳಿಗೆ 1ರಿಂದ2 ಕೋಟಿ ಅನುದಾನ ಪ್ರತಿ ವರ್ಷ ಸಿಗುತ್ತಿತ್ತು. ನಿರುದ್ಯೋಗಿಗಳು ಪಂಚಾಯಿತಿಗಳಿಗೆ ಹೋಗಿ ಅರ್ಜಿ ಸಲ್ಲಿಸಿದರೆ, ಈ ಯೋಜನೆಯಡಿ ಕೆಲಸ ಪಡೆಯಬಹುದಾಗಿತ್ತು.
ಅದೇ ಪಂಚಾಯಿತಿಯಲ್ಲಿ ಕೆಲಸವಿಲ್ಲದಿದ್ದರೆ, ಬೇರೆ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಅವರಿಗೆ ಉದ್ಯೋಗ ನೀಡಲು ಸಾಧ್ಯವಾಗದಿದ್ದರೆ, ಆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವುದು ಸರಕಾರÀಗಳ ಜವಾಬ್ದಾರಿಯಾಗಿತ್ತು. ವಿಶ್ವಬ್ಯಾಂಕ್ ಕೂಡ ಈ ಯೋಜನೆಯನ್ನು ಶ್ಲಾಘಿಸಿತ್ತು. ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಈ ವಿಚಾರವಾಗಿ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಜೊತೆ ಚರ್ಚೆ ನಡೆಸಬೇಕಿತ್ತು ಎಂದು ಕಾಂಗ್ರೆಸ್ ನಾಯಕರು ಉಲ್ಲೇಖಿಸಿದರು.
ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಎಸ್.ಎಂ.ಕೃಷ್ಣ ಅವರ ಸರಕಾರದಲ್ಲಿ 25 ಇಲಾಖೆಗಳನ್ನು ಪಂಚಾಯಿತಿಗಳ ವ್ಯಾಪ್ತಿಗೆ ನೀಡಿ ಸಂವಿಧಾನದ 73 ಹಾಗೂ 74ನೆ ಪರಿಚ್ಚೇಧಕ್ಕೆ ತಿದ್ದುಪಡಿ ತಂದು ಬಲಪಡಿಸಲಾಗಿತ್ತು. ಮನರೇಗಾ ಯೋಜನೆಯಲ್ಲಿ ಕೃಷಿ ಕಾರ್ಮಿಕರು ತಮ್ಮದೇ ಜಮೀನಿನಲ್ಲಿ ಕೆಲಸ ಮಾಡಿದರೂ ವೇತನ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಈಗ ನೂತನ ಕಾಯ್ದೆ ಪ್ರಕಾರ ಪಂಚಾಯಿತಿಗಳಲ್ಲಿ ಯಾವ ಕೆಲಸ ಆಗಬೇಕು ಎಂದು ಕೇಂದ್ರ ಸರಕಾರ ನಿರ್ಧರಿಸಲಿದೆ. ಅಲ್ಲದೆ ಗುತ್ತಿಗೆದಾರರ ಅಡಿಯಲ್ಲಿ ಈ ಕಾರ್ಮಿಕರು ಕೆಲಸ ಮಾಡಬೇಕಾಗಿದೆ. ಯೋಜನೆಯ ಅನುದಾನವನ್ನು 60:40 ಅನುಪಾತಕ್ಕೆ ಬದಲಿಸಲಾಗಿದೆ. ಬಿಜೆಪಿ ಆಡಳಿತ ರಾಜ್ಯಗಳು ಈ ನೂತನ ಕಾಯ್ದೆ ಜಾರಿ ಅಸಾಧ್ಯವಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.
ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಹಿರಿಯ ನಾಯಕರು. ಅವರಿಗೆ ಗ್ರಾಮೀಣ ಪ್ರದೇಶಗಳ ಬಗ್ಗೆ ಅರಿವಿದೆ. ಅಂತಹವರು ಈ ಕಾಯ್ದೆ ಜಾರಿಗೆ ತರುತ್ತಾರೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸರಕಾರ ಏಕಾಏಕಿ ಈ ಕಾಯ್ದೆ ಜಾರಿಗೆ ತಂದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ನೂತನ ಕಾಯ್ದೆ ಹಿಂಪಡೆದು ಮನರೇಗಾ ಮರುಜಾರಿಗೆ ತರಬೇಕು. ಈ ವಿಚಾರವಾಗಿ ಇಡೀ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
ರಾಜ್ಯಗಳಿಗೆ ಹಾಗೂ ಪಂಚಾಯಿತಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ನಿಮ್ಮ ಮೂಲಕ ಮನವಿ ಮಾಡಲಾಗುತ್ತಿದೆ. ನಾವು ಪಂಚಾಯಿತಿಗಳ ಅಧಿಕಾರ, ಸಂವಿಧಾನಿಕವಾಗಿ ನೀಡಲಾಗಿರುವ ಉದ್ಯೋಗ ಖಾತರಿ ಹಕ್ಕು ರಕ್ಷಣೆಗೆ, ಮಹಾತ್ಮಾ ಗಾಂಧಿ ಅವರ ಹೆಸರನ್ನು ಈ ಯೋಜನೆಯಲ್ಲಿ ಮುಂದುವರಿಸಬೇಕು ಎಂದು ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಫ್ರೀಡಂ ಪಾರ್ಕ್: ಇದಕ್ಕೂ ಮೊದಲು ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್, 2005ರಲ್ಲಿ ಕಾಂಗ್ರೆಸ್ ಸರಕಾರ ರಾಷ್ಟ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಮನರೇಗಾ ಜಾರಿಗೆ ತಂದಿತ್ತು. ಅಂದಿನಿಂದ ಇದುವರೆಗೆ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಉದ್ಯೋಗದ ಹಕ್ಕು ಸಿಗುವಂತಾಯಿತು ಎಂದು ವಿವರಿಸಿದರು.
ಈ ಕಾನೂನು ಪ್ರಕಾರ ವರ್ಷಕ್ಕೆ ನೂರು ದಿನಗಳ ಕಾಲ ಉದ್ಯೋಗ ಅವಕಾಶ ಇದೆ. ಉದ್ಯೋಗ ಕೊಡದಿದಿದ್ದರೆ ನಿರುದ್ಯೋಗ ಭತ್ಯೆ ಕೊಡಲು ಅವಕಾಶ ಇದೆ. ಪಂಚಾಯತ್‍ಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. ಯೋಜನೆಗೆ ಶೇ.90ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ ಈಗ 100 ದಿನಗಳ ಬದಲಾಗಿ 125 ದಿನ ಮಾಡಲಾಗಿದೆ. ಇದು ಕಣ್ಣೊರೆಸುವ ತಂತ್ರ, ಆದರೆ ಉದ್ಯೋಗ ನೀಡುವುದು ಕೇಂದ್ರ ಸರಕಾರವಾಗಿದೆ ಎಂದು ಅವರು ಟೀಕಿಸಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಮನರೇಗಾ ನಿಷ್ಕ್ರಿಯಗೊಳಿಸಿ ಕೇಂದ್ರ ಸರಕಾರ ಗ್ರಾಮೀಣ ಜನರಿಗೆ ಅನ್ಯಾಯ ಮಾಡಿದೆ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ತಪ್ಪಿಸುವ ಮೂಲಕ ಅನ್ಯಾಯ ಇದಾಗಿದೆ ಎಂದರು.
ಸಚಿವ ಚಲುವರಾಯಸ್ವಾಮಿ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನವಿರೋಧಿ ನಡೆ ಅನುಸರಿಸಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ಯಾವುದೇ ಯೋಜನೆ ಜಾರಿ ಮಾಡಿಲ್ಲ. ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಜನರನ್ನು ವಿಭಜನೆ ಮಾಡಲಾಗುತ್ತಿದೆ. ಮಹಾತ್ಮಾ ಗಾಂಧಿ ಹೆಸರು ಬದಲಾವಣೆ ಮಾಡುವುದೇ ಸಾಧನೆ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರ ಹೆಗಲ ಮೇಲೆ ಟವೆಲ್: ಕೇಂದ್ರ ಸರಕಾರ ಮನರೇಗಾ ಯೋಜನೆ ರದ್ದುಗೊಳಿಸಲು ಮುಂದಾಗಿರುವ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಹೆಗಲ ಮೇಲೆ ಟವೆಲ್ ಹಾಕಿಕೊಂಡು ಗಮನ ಸೆಳೆದರು. ಇತ್ತ ವೇದಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟವೆಲ್‍ನಲ್ಲಿಯೇ ಪೇಟಾ ಸುತ್ತಿದ ದೃಶ್ಯ ಕಂಡಿತು.
ನೀವು ರಾಜ್ಯಪಾಲರು, ಇದು ರಾಜಭವನವೇ:
ಮನವಿ ನೀಡುವ ಸಂದರ್ಭದಲ್ಲಿ ಶಿವಕುಮಾರ್ ಅವರು ಮಾತನಾಡುವಾಗ ರಾಜಭವನ ಎಂದು ಉಲ್ಲೇಖಿಸಿದರು. ಆಗ ರಾಜ್ಯಪಾಲರು ಈಗ ಇದು ಲೋಕಭವನ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ನೀವು ರಾಜ್ಯಪಾಲರು, ನಮ್ಮ ಪಾಲಿಗೆ ಇದು ರಾಜಭವನವೇ. ನಿಮ್ಮ ಹುದ್ದೆ ರಾಜ್ಯಪಾಲರೆಂದೇ ಇದೆ, ಅದನ್ನು ಬದಲಿಸಿಲ್ಲ. ನೀವು ರಾಜ್ಯಪಾಲ ಎಂಬ ಹೆಸರಿನಲ್ಲೇ ಸಹಿ ಹಾಕುತ್ತೀರಿ. ನಾವು ರಾಜಭವನಕ್ಕೆ ಗೌರವ ನೀಡುತ್ತೇವೆ. ರಾಜಭವನ ರಸ್ತೆಯ ಹೆಸರನ್ನು ನಾವು ಬದಲಿಸಿಲ್ಲ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.
ಸಂಚಾರ ದಟ್ಟಣೆ:
ಕಾಂಗ್ರೆಸ್ ನಾಯಕರು ಮಂಗಳವಾರ ಬೆಳಗ್ಗೆ ಇಲ್ಲಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಆನಂದರಾವ್ ವೃತ್ತ, ಮಹಾರಾಣಿ ಕಾಲೇಜು, ಶಿವಾನಂದ ವೃತ್ತ, ನೃಪತುಂಗ ರಸ್ತೆ, ಕೆಜಿ ರಸ್ತೆ ಕಡೆ ಸಂಚಾರ ದಟ್ಟಣೆ ಕಂಡುಬಂದಿತು.