×
Ad

ಇನ್ವೆಸ್ಟ್ ಕರ್ನಾಟಕ ಸಮಾವೇಶ: 2025ಕ್ಕೆ 100.69 ಕೋಟಿ ರೂ.ವೆಚ್ಚ: ಎಂ.ಬಿ.ಪಾಟೀಲ್

Update: 2026-01-28 00:30 IST

ಬೆಂಗಳೂರು: ಇನ್ವೆಸ್ಟ್ ಕರ್ನಾಟಕ-2025 ಸಮಾವೇಶಕ್ಕಾಗಿ ಒಟ್ಟು 100.69 ಕೋಟಿ ರೂ. ವೆಚ್ಚವಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯೆ ಡಾ.ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಇನ್ವೆಸ್ಟ್ ಕರ್ನಾಟಕ-2022 ಸಮಾವೇಶಕ್ಕಾಗಿ ಒಟ್ಟು 74.99 ಕೋಟಿ ರೂ. ವೆಚ್ಚವಾಗಿದೆ. ಇನ್ವೆಸ್ಟ್ ಕರ್ನಾಟಕ-2025ರ ಸಮಾವೇಶದಲ್ಲಿ ಸರಕಾರವು 98 ಕಂಪೆನಿಗಳೊಂದಿಗೆ ಒಟ್ಟು 6,23,970 ಕೋಟಿ ರೂ.ಬಂಡವಾಳ ಹೂಡಲು ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ ಎಂದರು.

ಬಂಡವಾಳ ಹೂಡುವ ಕಂಪೆನಿಗಳಿಗೆ ಕೈಗಾರಿಕಾ ನೀತಿ 2025-30, ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27 ಹಾಗೂ ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30 ರನ್ವಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಲು ಹಾಗೂ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸಲು ಏಕಗವಾಕ್ಷಿ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಹಾಗೂ ಇತರ ಸಂಬಂಧಿಸಿದ ಇಲಾಖೆಗಳ ಸೇವೆಗಳನ್ನು ಸಂಯೋಜಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಫೆಬ್ರವರಿ 2025ರಂದು ಜರುಗಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಗೆ, ಮೆ. ಜೆಎಸ್‍ಡಬ್ಲ್ಯೂ ಗ್ರೀನ್ ಫೀಲ್ಡ್ ಪೋರ್ಟ್ - ಖೇಣಿಯಲ್ಲಿ ಬಂದರು ಸ್ಥಾಪಿಸಲು ಘೋಷಣೆ ಮಾಡಿರುತ್ತದೆ. ಈ ಯೋಜನೆಗೆ ಸುಮಾರು 4,453 ಕೋಟಿ ರೂ. ಬಂಡವಾಳ ಹೂಡಲಿದ್ದು ಅಂದಾಜು 460 ಎಕರೆ ಭೂಮಿಯ ಅಗತ್ಯವಿರುತ್ತದೆ. ಈ ಭೂಮಿಯು ಲಭ್ಯವಿದ್ದಲ್ಲಿ ಕೆ.ಐ.ಎ.ಡಿ.ಬಿ ಯಿಂದ ನಿಯಮಾನುಸಾರ ಸ್ವಾಧೀನಪಡಿಸಲಾಗುತ್ತದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News