ಸುರೇಶ್ ಕುಮಾರ್ ನಿವಾಸಕ್ಕೆ ಪೋಸ್ಟರ್ ಅಂಟಿಸಿದ ಪ್ರಕರಣ | ‘ಹಕ್ಕು ಬಾಧ್ಯತೆಗಳ ಸಮಿತಿ’ ಪರಿಶೀಲನೆಗೆ: ಸ್ಪೀಕರ್ ಯು.ಟಿ. ಖಾದರ್
ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದ ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಹಿರಿಯ ಸದಸ್ಯ ಸುರೇಶ್ ಕುಮಾರ್ ನಿವಾಸದ ಬಳಿ ಪೋಸ್ಟರ್ ಅಂಟಿಸಿರುವ ಪ್ರಕರಣವನ್ನು ವಿಧಾನಸಭೆಯ ‘ಹಕ್ಕು ಬಾಧ್ಯತೆಗಳ ಸಮಿತಿ’ಗೆ ವಹಿಸಲಿದ್ದು, ಸಮಿತಿ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಪ್ರಕಟಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶೋತ್ತರ ವೇಳೆಯ ಬಳಿಕ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ವಿಷಯ ಪ್ರಸ್ತಾಪಿಸಿ, ‘ಸದನದಲ್ಲಿ ಶುಕ್ರವಾರ ನಾನು ಸಚಿವ ಭೈರತಿ ಸುರೇಶ್ ವಿರುದ್ಧ ಉಲ್ಲೇಖಿಸಿದ ಹೇಳಿಕೆ ವಿಚಾರ ಸಂಬಂಧ ತಮ್ಮ ನಿವಾಸದ ಬಳಿ ಶನಿವಾರ ಕೆಲ ಕಾರ್ಯಕರ್ತರು ಬಂದು ಪೋಸ್ಟರ್ ಅಂಟಿಸಿದ್ದಾರೆ. ಅಲ್ಲದೆ, ತನ್ನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಆತಂಕ ಸೃಷ್ಟಿಸಿದೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ‘ಸದನದಲ್ಲಿ ಅಸಂಸದೀಯ ಶಬ್ದಗಳನ್ನು ಬಿಟ್ಟು ಇನ್ನಿತರ ವಿಚಾರ ಮಾತನಾಡಲು ಅವಕಾಶವಿದೆ. ಇಲ್ಲಿ ಏನೇ ಚರ್ಚೆಯಾದರೂ ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಿದ್ದಂತೆ. ಸದನದಲ್ಲಿ ಪ್ರಸ್ತಾಪವಾದ ವಿಚಾರಕ್ಕೆ ಹೊರಗಿನವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪೋಸ್ಟರ್ ಅಂಟಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಸ್ಪಷ್ಟಪಡಿಸಿದೆ. ಜನಪ್ರತಿನಿಧಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ತಾವು ಪ್ರಸ್ತಾಪಿಸಿರುವ ಈ ವಿಚಾರ ತಮ್ಮ ಕರ್ತವ್ಯಕ್ಕೆ ಚ್ಯುತಿಯಾಗಿದ್ದರೆ ಇದನ್ನು ‘ಹಕ್ಕು ಬಾಧ್ಯತೆಗಳ ಸಮಿತಿ’ಗೆ ವರ್ಗಾಯಿಸಲಾಗುವುದು, ಈ ಬಗ್ಗೆ ನೀವು ಏನು ಹೇಳ್ತೀರಿ?’ ಎಂದು ಸ್ಪೀಕರ್ ಖಾದರ್ ಕೇಳಿದರು. ಆಗ ಸುರೇಶ್ ಕುಮಾರ್, ‘ಯಾವುದೇ ಜನಪ್ರತಿನಿಧಿ ಆತಂಕದಿಂದ ಮಾತನಾಡುವಂತೆ ಆಗುವುದು ಬೇಡ. ನಮ್ಮದೇ ಆದ ರೀತಿ ರಿವಾಜುಗಳಿವೆ. ಹೀಗಾಗಿ ಈ ವಿಚಾರ ‘ಹಕ್ಕು ಬಾಧ್ಯತೆಗಳ ಸಮಿತಿ’ಗೆ ವಹಿಸಿ, ಪೋಸ್ಟರ್ ಅಂಟಿಸಿದವರಿಗೆ ಪಾಠ ಆಗಬೇಕು’ ಎಂದು ಮನವಿ ಮಾಡಿದರು. ಆಗ ಸ್ಪೀಕರ್, ‘ಈ ವಿಚಾರವನ್ನು ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿಗೆ ವರ್ಗಾಯಿಸಲಾಗುವುದು’ ಎಂದು ರೂಲಿಂಗ್ ನೀಡಿದರು.
ಆರಂಭಕ್ಕೆ ಮಾತನಾಡಿದ ಸುರೇಶ್ ಕುಮಾರ್, ‘ಶುಕ್ರವಾರದ ಸದನದಲ್ಲಿ ಸಚಿವ ಭೈರತಿ ಸುರೇಶ್ ಕುರಿತು ವಾಡಿಕೆ ಮಾತು ಹೇಳಿದ್ದೆ. ನಂತರ ಆ ಮಾತನ್ನು ಹಿಂಪಡೆಯುವುದಾಗಿ ಹೇಳಿದ್ದೆ. ಅಲ್ಲದೆ, ಕಡತದಿಂದಲೂ ತೆಗೆಯಲಾಗಿತ್ತು. ಆದರೂ ಕೆಲ ಕಾರ್ಯಕರ್ತರು ನನ್ನ ಮನೆಗೆ ಬಂದು ಪೋಸ್ಟರ್ ಅಂಟಿಸಿದ್ದಾರೆ. ಇದು ಹೀನ ಸಂಸ್ಕೃತಿ’ ಎಂದರು.
‘ಈ ಹಿಂದೆ ಕಾಂಗ್ರೆಸ್ ಪಕ್ಷದ ಶೇ.40ರಷ್ಟು ಕಮಿಷನ್, ಪೇ ಸಿಎಂ ಅಭಿಯಾನ ಶುರುವಾಗಿದ್ದು, ಇದೀಗ ಇಲ್ಲಿಗೆ ಬಂದು ತಲುಪಿದೆ. ಈ ರೀತಿಯಾದರೆ ಯಾರಿಗೆ ರಕ್ಷಣೆ ಇದೆ. ವಿಧಾನಸಭೆಯಲ್ಲಿ ಮಾತನಾಡಿರುವ ವಿಚಾರ ಹೊರಗೆ ಪ್ರಸ್ತಾಪ ಆಗಬಹುದೇ, ಯಾವ ಗಾದೆ ಮಾತುಗಳನ್ನು ಬಳಸಬೇಕು, ಬಳಸಬಾರದು ಎಂಬ ಪಟ್ಟಿಯನ್ನು ಕೊಟ್ಟುಬಿಡಿ’ ಎಂದು ಸುರೇಶ್ ಕುಮಾರ್ ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಸುರೇಶ್ ಕುಮಾರ್ ಉಲ್ಲೇಖಿಸಿದ ಶಬ್ದವನ್ನು ಕಡತದಿಂದ ತೆಗೆದ ಮೇಲೆ ಇಲ್ಲಿಗೇ ಮುಗಿಸೋಣ’ ಎಂದು ಸಿಎಂ ಹೇಳಿದ್ದರು. ಅವರು ಬಳಸಿದ ಶಬ್ದ ಅಶ್ಲೀಲವೂ ಅಲ್ಲ, ಅಸಂಸದೀಯವೂ ಅಲ್ಲ. ಆದರೂ ಪೊಲೀಸ್ ಠಾಣೆಯಲ್ಲಿ ಈ ವಿಚಾರದಲ್ಲಿ ಹೇಗೆ ದೂರು ಕೊಡುತ್ತಾರೆ. ಸದನದಲ್ಲಿ ಚರ್ಚೆಯಾಗುವ ವಿಚಾರವನ್ನು ಕೋರ್ಟ್‍ನಲ್ಲೂ ಪ್ರಶ್ನಿಸಲಾಗದು, ಸರಕಾರ ಖಡತ್ ಉತ್ತರ ನೀಡಬೇಕು’ ಎಂದು ಕೋರಿದರು.
ಬಳಿಕ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ‘ನಾನು ಖಡಕ್ ಆಗಿಯೇ ಉತ್ತರ ಕೊಡುತ್ತೇನೆ. ಇನ್ನು ಮೇಲೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಯಾರು ಪೋಸ್ಟರ್ ಅಂಟಿಸಿದ್ದಾರೋ, ಈ ಬಗ್ಗೆ ನಾನೇ ಖುದ್ದಾಗಿ ವಿಚಾರಿಸುತ್ತೇನೆ. ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಅವರಿಗೆ ಹಕ್ಕಿದೆ, ನೀಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸುತ್ತೇನೆ. ಇದು ಒಳ್ಳೆಯ ಸಂಪ್ರದಾಯವಲ್ಲ. ಇದನ್ನು ನಾನು ಖಂಡಿಸುತ್ತೇನೆ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.