ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚನೆ ಪ್ರಕರಣ: ಅಭಿನವ ಹಾಲಶ್ರೀಗೆ ಜಾಮೀನು
ಬೆಂಗಳೂರು, ನ.8: ಉದ್ಯಮಿ ಗೋವಿಂದ ಪೂಜಾರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮೂರನೇ ಆರೋಪಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಬುಧವಾರ ಹಾಲಶ್ರೀ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಅಭಿನವ ಹಾಲಶ್ರೀಗೆ ಷರತ್ತುಬದ್ಧ ಜಾಮೀನು ನೀಡಿದೆ.
ವಿಚಾರಣೆ ಆರಂಭದಲ್ಲಿಯೇ ಸರಕಾರಿ ಅಭಿಯೋಜಕ ಎಸ್.ಎ.ಬೆಳ್ಳಿಯಪ್ಪ ಅವರು ಅರ್ಜಿದಾರರ ವಿರುದ್ಧದ ತನಿಖಾಧಿಕಾರಿ ಇಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆಂದು ಪೀಠದ ಗಮನಕ್ಕೆ ತಂದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ಆರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ತನಿಖೆ ಪೂರ್ಣಗೊಂಡಂತಾಗಿದೆ. ಇದರಿಂದ ಅರ್ಜಿದಾರರು ತನಿಖೆ ಎದುರಿಸುವ ಅಗತ್ಯವಿಲ್ಲವಾಗಿದೆ. ಅರ್ಜಿದಾರರು ಪಡೆದಿದ್ದಾರೆ ಎನ್ನಲಾದ ಹಣವನ್ನು ಈಗಾಗಲೇ ತನಿಖಾಧಿಕಾರಿಗಳು ಜಪ್ತಿ ಮಾಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ ಎಂದು ಉಲ್ಲೇಖಿಸಿದರು.
ಇನ್ನೂ, ಅರ್ಜಿದಾರರ ಮೇಲಿನ ಆರೋಪಗಳ ಸತ್ಯಾಸತ್ಯತೆಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆಯಲ್ಲಿ ಬಯಲಾಗಬೇಕಿದೆ.ಜತೆಗೆ ಏಳಕ್ಕಿಂತ ಕಡಿಮೆ ವರ್ಷ ಶಿಕ್ಷೆ ವಿಧಿಸಬಹುದಾದ ಆರೋಪಗಳು ಅರ್ಜಿದಾರರ ಮೇಲಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಲು ಇದು ಅರ್ಹ ಪ್ರಕರಣವಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಈ ವಾದ ಜಲಜಪರಿಗಣಿಸಿದ ಪೀಠವು ಹಾಲಶ್ರೀ ಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಹಾಲಶ್ರೀ ಸ್ವಾಮೀಜಿಯನ್ನು ಸೆಪ್ಟೆಂಬರ್ 19ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು.
ಜಾಮೀನು ನೀಡಲು ಬೆಂಗಳೂರಿನ 57ನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿತ್ತು. ಇದರಿಂದ ಸ್ವಾಮೀಜಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಏನಿದು ವಂಚನೆ ಪ್ರಕರಣ..?
ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ತನ್ನಿಂದ ಐದು ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ, ಉದ್ಯಮಿ ಗೋವಿಂದಬಾಬು ಪೂಜಾರಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ದೂರುದಾರರಿಂದ 1.5 ಕೋಟಿ ರೂ. ಹಣ ಪಡೆದ ಆರೋಪದ ಮೇಲೆ ಹಾಲಶ್ರೀ ಸ್ವಾಮೀಜಿಯನ್ನು ಸೆಪ್ಟೆಂಬರ್ 19ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು.