×
Ad

ಸಿಎನ್‍ಜಿ ಇಂಧನ ಬಳಕೆಯಿಂದ ಶೇ.40ರಷ್ಟು ಇಂಗಾಲ ಪ್ರಮಾಣ ಕಡಿಮೆ: ಹಿರ್ದೇಶ್ ಕುಮಾರ್

Update: 2023-11-01 19:34 IST

ಬೆಂಗಳೂರು, ನ.1: ವಾಹನಗಳಿಗೆ ಸಿಎನ್‍ಜಿ ಇಂಧನ ಬಳಕೆ ಮಾಡುವುದರಿಂದ ಇಂಗಾಲ ಪ್ರಮಾಣವು ಶೇ.35 ರಿಂದ 40ರಷ್ಟು ಕಡಿಮೆಯಾಗುತ್ತದೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಿಎನ್‍ಜಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೆಂಗಳೂರಿನ ಒಐಸಿ-ಗೇಲ್ ಗ್ಯಾಸ್ ಇಂಡಿಯಾದ ಸಿಜಿಎಂ(ಸಿಜಿಡಿ) ಹಿರ್ದೇಶ್ ಕುಮಾರ್ ತಿಳಿಸಿದರು.

ಬುಧವಾರ ಕೆ.ಆರ್.ಪುರದ ಐಟಿಐ ಕಾಲನಿಯಲ್ಲಿ ಹೊಸ ಸಿಎನ್‍ಜಿ ವಾಹನಗಳ ಪ್ರಚಾರ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರಕಾರವು ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಿಎನ್‍ಜಿಗೆ ಪ್ರೋತ್ಸಾಹ ನೀಡುತ್ತಿದೆ. ಈ ವಿಚಾರದಲ್ಲಿ ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಿದೆ ಎಂದರು.

ಗೇಲ್ ಗ್ಯಾಸ್ ಇಂಡಿಯಾ ಸಂಸ್ಥೆಯು ಕೇವಲ ಖಾಸಗಿ ವಾಹನಗಳಿಗಷ್ಟೇ ಅಲ್ಲ, ಈಗ ವಾಣಿಜ್ಯ ವಾಹನಗಳು ಹಾಗೂ ಭಾರಿ ವಾಹನಗಳಿಗೂ 5 ಸಾವಿರ ರೂ.ವರೆಗಿನ ಸಿಎನ್‍ಜಿ ಇಂಧನ ಒದಗಿಸುವ ಯೋಜನೆಯನ್ನು ಇಂದು ಚಾಲನೆ ನೀಡಿದೆ. ರಾಜ್ಯ ಸರಕಾರವು ನಗರ ಅನಿಲ ಸರಬರಾಜು ನೀತಿ(ಸಿಜಿಡಿ) ಜಾರಿಗೆ ತರಲು ಮುಂದಾಗಿದ್ದು, ಶೀಘ್ರವೆ ಅನುಷ್ಠಾನಗೊಳ್ಳಲಿದೆ. ಇದರಿಂದಾಗಿ, ಸಿಎನ್‍ಜಿ ಹಾಗೂ ಪಿಎನ್‍ಜಿ ಸರಬರಾಜು ಮಾಡಲು ಸಹಕಾರಿಯಾಗಲಿದೆ ಎಂದು ಹಿರ್ದೇಶ್ ಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಸಿಎನ್‍ಜಿ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು 1500 ಕೋಟಿ ರೂ.ಗಳ ಹೂಡಿಕೆ ಮಾಡಿದ್ದೇವೆ. 2 ಸಾವಿರ ಕಿ.ಮೀ.ಪೈಪ್ ಲೈನ್ ಅಳವಡಿಸಿದ್ದೇವೆ. ಸುಮಾರು 1.50 ಲಕ್ಷ ಮನೆಗಳಿಗೆ ಅನಿಲ ಸಂಪರ್ಕ ಕಲ್ಪಿಸಿದ್ದೇವೆ. ಬೆಂಗಳೂರಿನ ಎಲ್ಲ ಮೂಲೆಗಳಲ್ಲಿ 101 ಸಿಎನ್‍ಜಿ ಸ್ಟೇಷನ್‍ಗಳನ್ನು ಸ್ಥಾಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ 5 ಕಿ.ಮೀ. ವ್ಯಾಪ್ತಿಯಲ್ಲಿ ಸಿಎನ್‍ಜಿ ಸ್ಟೇಷನ್ ಇರಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.

ಗೇಲ್ ಗ್ಯಾಸ್ ಇಂಡಿಯಾ ಸಿಎನ್‍ಜಿ ಪ್ರಚಾರ ಯೋಜನೆಗಳಿಂದಾಗಿ ಈ ಹಿಂದೆ ಪ್ರತಿದಿನ 20 ಸಾವಿರ ಕೆ.ಜಿ.ಗಳಷ್ಟಿದ್ದ ಸಿಎನ್‍ಜಿ ಇಂಧನ ಮಾರಾಟದ ಪ್ರಮಾಣವು ಈಗ 1.90 ಲಕ್ಷ ಕೆಜಿಗೆ ತಲುಪಿದೆ. ಮುಂದಿನ ಒಂದು ವರ್ಷದಲ್ಲಿ ಈ ಪ್ರಮಾಣವು ದ್ವಿಗುಣಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಹಿರ್ದೇಶ್ ಕುಮಾರ್ ಹೇಳಿದರು.

ಸ್ವಾಗತ ಭಾಷಣ ಮಾಡಿದ ಗೇಲ್ ಇಂಡಿಯಾ ಮಾರ್ಕೆಂಟಿಂಗ್ ಡಿಜಿಎಂ ವಿನಯ್ ಶ್ರೀವಾಸ್ತವ್, ಎರಡು ವರ್ಷಗಳ ಮುನ್ನ ಬೆಂಗಳೂರಿನಲ್ಲಿ ಒಂದೇ ಒಂದು ಸಿಎನ್‍ಜಿ ಆಟೋವನ್ನು ನೋಡುವುದು ಕಷ್ಟವಾಗುತ್ತಿತ್ತು. ಆದರೆ, ಸುಮಾರು 51 ಸಾವಿರ ನೋಂದಾಯಿತ ಸಿಎನ್‍ಜಿ ವಾಹನಗಳಿವೆ. ಪ್ರತಿದಿನ ಸರಾಸರಿ 1.90 ಲಕ್ಷ ಕೆಜಿ ಸಿಎನ್‍ಜಿ ಇಂಧನವನ್ನು ನಾವು ಮಾರಾಟ ಮಾಡುತ್ತಿದ್ದೇವೆ. ದಿಲ್ಲಿ, ಮುಂಬೈ ರೀತಿಯಲ್ಲಿ ಬೆಂಗಳೂರು ನಗರವು ‘ಸಿಎನ್‍ಜಿ ಸಿಟಿ’ಯಾಗಲಿದೆ ಎಂದರು.

ಗೇಲ್ ಗ್ಯಾಸ್ ಸಿಎನ್‍ಜಿ ಪ್ರಚಾರ ಯೋಜನೆ: ಹೊಸ ಪ್ಯಾಸೆಂಜರ್ ಆಟೋ ರಿಕ್ಷಾಗಳಿಗೆ 14 ಸಾವಿರ ರೂ, ಸಣ್ಣ ಮತ್ತು ಮಧ್ಯಮ ಸರಕು ವಾಹನಗಳಿಗೆ 25 ಸಾವಿರ ರೂ., ಬಸ್ ಮತ್ತು ಟ್ರಕ್‍ಗಳಿಗೆ 75 ಸಾವಿರ ರೂ.ವರೆಗಿನ ಸಿಎನ್‍ಜಿ ಇಂಧನ ಒದಗಿಸುವ ಪ್ರಚಾರ ಯೋಜನೆ ಇದಾಗಿದೆ. ವಾಣಿಜ್ಯ ವಾಹನಗಳಿಗೆ ಶುದ್ಧ ಮತ್ತು ಪರಿಣಾಮಕಾರಿಯಾದ ಸಂಕುಚಿತ ನೈಸರ್ಗಿಕ ಅನಿಲ ಬಳಕೆಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಸಿಎನ್‍ಜಿ ಇಂಧನ ಉಡುಗೊರೆ ಕಾರ್ಡ್‍ಗಳ ಮೂಲಕ ಒದಗಿಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾರುತಿ ಸುಜುಕಿಯ ಪ್ರಾದೇಶಿಕ ವ್ಯವಸ್ಥಾಪಕ ಸುರೇಶ್ ಬಾಬು, ಎಚ್.ಪಿ.ಸಿ.ಎಲ್‍ನ ಡಿಜಿಎಂ ಎಂ.ಆರ್.ಕುಮಾರ್, ಸಿಪಿಐಎಲ್ ನ ಪಂಕಜ್‍ಗುಪ್ತಾ, ಗೇಲ್ ಇಂಡಿಯಾ ಬೆಂಗಳೂರಿನ ಎಚ್‍ಒಡಿ ವಿ.ಶಿವಶಂಕರ್ ಸೇರಿದಂತೆ ಉಬರ್, ಓಲಾ, ಎವರೆಸ್ಟ್ ಫ್ರೀಟ್, ಪೇಟಿಎಂನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News