‘ವಿಬಿ-ಜಿ ರಾಮ್ ಜಿ ಯೋಜನೆ ಕುರಿತು ಅಪಪ್ರಚಾರ’ | ಕಾಂಗ್ರೆಸ್ ಷಡ್ಯಂತ್ರಕ್ಕೆ ಅವಕಾಶ ನೀಡುವುದಿಲ್ಲ: ಬಿ.ವೈ.ವಿಜಯೇಂದ್ರ
ಬೆಂಗಳೂರು : ‘ವಿಬಿ: ಜಿ ರಾಮ್ ಜಿ ಯೋಜನೆ’ ಕುರಿತು ಸುಳ್ಳು ಅಪಪ್ರಚಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಅವಕಾಶ ಕೊಡುವುದಿಲ್ಲ. ಗ್ರಾಮ ಮಟ್ಟಕ್ಕೂ ತೆರಳಿ ಜನರಿಗೆ, ಕಾರ್ಮಿಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಆ ಮೂಲಕ ಕಾಂಗ್ರೆಸ್ ಪಕ್ಷದ ಷಡ್ಯಂತ್ರವನ್ನು ಬಯಲಿಗೆ ಎಳೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಯೋಜನೆಗಳ ಕುರಿತು ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಏಳೆಂಟು ಲಕ್ಷ ಕೋಟಿ ರೂ. ಖರ್ಚು ಮಾಡುವ ಈ ಯೋಜನೆ ಸುಲಲಿತವಾಗಿ ಸಾಗಬೇಕು, ಬಡವರಿಗೆ ತಲುಪಬೇಕೆಂದು ಪ್ರಧಾನಿ ಮೋದಿ ಆಲೋಚಿಸಿದ್ದು ತಪ್ಪೇ ಎಂದು ಅವರು ಪ್ರಶ್ನಿಸಿದರು.
ನರೇಗಾ ಯೋಜನೆಯನ್ನು ಮರು ಜಾರಿ ಮಾಡುವ ಮೊದಲೆ ಕಾಂಗ್ರೆಸ್ ಪಕ್ಷವು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಸುಳ್ಳುಗಳನ್ನು ಹರಡುತ್ತಿದೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕು, ಜೊತೆಗೆ ಮೂಲಭೂತ ಸೌಕರ್ಯಗಳನ್ನೂ ಕೊಡಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ, ಇಡಿ ಯೋಜನೆಯಲ್ಲಿ ಗಮನಾರ್ಹ, ಮೌಲ್ಯಯುತ ಬದಲಾವಣೆಗಳನ್ನು ಜಾರಿಗೊಳಿಸಿದ್ದಾರೆ ಎಂದು ವಿಜಯೇಂದ್ರ ವಿವರಿಸಿದರು.
ಕೆಲಸ ಮಾಡುವ ದಿನಗಳನ್ನು 100 ರಿಂದ 125ಕ್ಕೆ ಏರಿಸಿದ್ದಾರೆ. ಕೃಷಿ ಚಟುವಟಿಕೆ ನಡೆಯುವಾಗ ರೈತರಿಗೆ ಅನಾನುಕೂಲ ಆಗಬಾರದೆಂಬ ದೃಷ್ಟಿಯಿಂದ ಆ ಸಂದರ್ಭದಲ್ಲಿ ಜಿ ರಾಮ್ ಜಿ ನಿಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂದಿನಂತೆ ತೀರ್ಮಾನಗಳು ಆಗಲಿವೆ. ಗ್ರಾಮ ಪಂಚಾಯಿತಿ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿಲ್ಲ ಎಂದು ಅವರು ಹೇಳಿದರು.
ವಿಬಿ: ಜಿ ರಾಮ್ ಜಿ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಸ್ವಾಗತಾರ್ಹ. ಸದನದಲ್ಲಿ ಇದನ್ನು ಚರ್ಚಿಸೋಣ. ಮನರೇಗಾ ಮೂಲಕ ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ಏನು ಮಾಡಿದೆ? ಕಳೆದ 10 ವರ್ಷಗಳಲ್ಲಿ ನಾವು ಮೋದಿ ನಾಯಕತ್ವದಡಿ ಮಾಡಿದ ಸಾಧನೆ ಏನು ಎಂಬುದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ವಿಜಯೇಂದ್ರ ಸವಾಲು ಹಾಕಿದರು.