×
Ad

ಕುಮಾರಸ್ವಾಮಿ ಅನಗತ್ಯ ಮಾತು ಬಿಟ್ಟು ಎಚ್‍ಎಂಟಿಯವರಿಗೆ ನ್ಯಾಯ ಕೊಡಿಸಲಿ: ಡಿ.ಕೆ.ಸುರೇಶ್ ತಿರುಗೇಟು

"ಸಿಡಿ ಫ್ಯಾಕ್ಟರಿ ಇರುವುದು, ತಯಾರಾಗಿದ್ದು ಹೊಳೆನರಸೀಪುರದಲ್ಲಿಯಲ್ಲವೇ?"

Update: 2026-01-10 20:23 IST

ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅನಗತ್ಯವಾಗಿ ಮಾತನಾಡುವುದನ್ನು ಬಿಟ್ಟು ರಾಜ್ಯದ ಹಿತ ಕಾಪಾಡಲಿ, ಎಚ್‍ಎಂಟಿಯವರಿಗೆ ನ್ಯಾಯ ಕೊಡಿಸಲಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿರುಗೇಟು ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ಬಳ್ಳಾರಿ ಗಲಾಟೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪರಸ್ಪರ ವಾಗ್ವಾದದ ಕುರಿತು ಶನಿವಾರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಮಂಡ್ಯದಲ್ಲಿ ಉದ್ದಿಮೆ ಸ್ಥಾಪಿಸಲು ಮಂಡ್ಯ ಶಾಸಕ ಗಣಿಗ ರವಿ 100 ಎಕರೆ ಸರಕಾರಿ ಜಾಗವನ್ನು ಗುರುತಿಸಿದ್ದಾರೆ. ಸರಕಾರಿ ಜಾಗ ಗುರುತಿಸಲು ಅವರಿಗೆ ಏನು ಅಧಿಕಾರ ಇದೆ ಎಂದು ಕುಮಾರಸ್ವಾಮಿ ಕೇಳುತ್ತಾರೆ. ಶಾಸಕರಿಗೆ ಅಧಿಕಾರ ಇದೆಯೋ ಇಲ್ಲವೋ, ಸರಕಾರಿ ಜಾಗ ಎಲ್ಲಿದೆ ಎಂದು ಗುರುತಿಸಿದ್ದಾರೆ. ಅಲ್ಲಿಯ ಜನರಿಗೆ ಉದ್ಯೋಗ ಕೊಡಿಸಲು ನಿಮ್ಮ ಇಲಾಖೆಯಿಂದ ಏನು ಮಾಡುತ್ತೀರಿ ಅದನ್ನು ಹೇಳಿ. ಎಚ್‍ಎಂಟಿ ಉದ್ಧಾರ ಮಾಡುವುದಾಗಿ ಮಾತನಾಡುತ್ತಿದ್ದರಲ್ಲ, ಆ ಕೆಲಸ ಮಾಡಲಿ ಎಂದು ಸುರೇಶ್ ತಿರುಗೇಟು ನೀಡಿದರು.

ಸಿಡಿ ಫ್ಯಾಕ್ಟರಿ ಇರುವುದು, ತಯಾರಾಗಿದ್ದು ಹಾಸನದ ಹೊಳೆನರಸೀಪುರದಲ್ಲಿಯಲ್ಲವೇ?: ಜೆಡಿಎಸ್ ಎಕ್ಸ್ ಖಾತೆಯಲ್ಲಿ ಸಿಡಿ ಫ್ಯಾಕ್ಟರಿ ವಿಚಾರ ಪ್ರಸ್ತಾಪಿಸಿ ಕೀಳು ಭಾಷೆ ಬಳಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ನವರಿಗೆ ಕೆಲಸ ಇಲ್ಲ, ಉದ್ಯೋಗ ಇಲ್ಲ. ಸಿಡಿ ಫ್ಯಾಕ್ಟರಿಗಳು ಇದ್ದದ್ದು ಹಾಸನದ ಹೊಳೆನರಸಿಪುರದಲ್ಲಿ ಎಂದು ತಿರುಗೇಟು ನೀಡಿದರು.

ಹೊಳೆನರಸಿಪುರ ಹಾಗೂ ಪದ್ಮನಾಭನಗರಕ್ಕೆ ಹೋಗಿ ಎಲ್ಲಿ ಫ್ಯಾಕ್ಟರಿ ಇತ್ತು ಎಂದು ಕೇಳಿಕೊಳ್ಳಲಿ. ಯಾರು ಬೇಡ ಎಂದರು? ಯಾರು ಸಿಡಿ ಸೃಷ್ಟಿ ಮಾಡುತ್ತಿದ್ದರು ಎಂದು ಈಗ ಎಲ್ಲರಿಗೂ ಗೊತ್ತಿದೆಯಲ್ಲ. ಹಾಸನಕ್ಕಿಂತ ಉದಾಹರಣೆ ಬೇಕಾ? ಇಡೀ ದೇಶದಲ್ಲಿ ಅತ್ಯಂತ ಹೀನಾಯ ಕೃತ್ಯ ಯಾವುದಾದರೂ ಇದ್ದರೆ ಅದು ಹಾಸನದಲ್ಲಿ ನಡೆದ ದುರ್ಘಟನೆ. ಇದರ ಬಗ್ಗೆ ಒಂದು ವಿಷಾದ ವ್ಯಕ್ತಪಡಿಸಲಾಗದ ಜೆಡಿಎಸ್ ಮುಖಂಡರಿಗೆ ಬೇರೆ ವಿಚಾರವಾಗಿ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಸುರೇಶ್ ಕಿಡಿಗಾರಿದರು.

ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಮರಳುತ್ತಿದ್ದಾರೆ. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ‘ಡ್ಯಾಡಿ ಈಸ್ ಹೋಂ’ ಎಂದು ವಿಡಿಯೋ ಮಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಡ್ಯಾಡಿ? ಅವರು ಕೇಂದ್ರ ಸಚಿವ ಸ್ಥಾನ ಹಾಗೂ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಬಳಿಕವಷ್ಟೇ ಅಲ್ಲವೆ ಈ ಮಾತು. ಅವರು ರಾಜಿನಾಮೆ ನೀಡಿದ ಬಳಿಕ ರಾಜ್ಯಕ್ಕೆ ಮರಳುತ್ತಾರೆ ಎನ್ನಬಹುದು. ಸದ್ಯಕ್ಕೆ ದೇಶದ ಆಗುಹೋಗುಗಳ ಬಗ್ಗೆ ಗಮನಹರಿಸುತ್ತಿದ್ದಾರೆ. ಅಲ್ಲಿ ಅವರು ಇರುವುದು ಇಷ್ಟವಿಲ್ಲವೇ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ರಾಜ್ಯದ ವಿಚಾರವಾಗಿ ಹೆಚ್ಚು ಟೀಕೆ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಅವರು ಯಾವತ್ತು ದೇಶದ ವಿಚಾರ ಮಾತನಾಡಿದ್ದಾರೆ? ಅವರಿಗೆ ಆರೋಗ್ಯ ಸರಿಯಿಲ್ಲದಾಗ, ಮೂರು ತಿಂಗಳು ದಿಲ್ಲಿಯಲ್ಲಿ ಇದ್ದದ್ದು ಬಿಟ್ಟರೆ ಉಳಿದಂತೆ ಕರ್ನಾಟಕದಲ್ಲೆ ವಾಸ್ತವ್ಯ. ಅಷ್ಟು ಬಿಟ್ಟರೆ ಬೇರೇನಿದೆ ಎಂದರು.

ಕೇರಳ-ಕರ್ನಾಟಕ ನಡುವಣ ಬಾಂಧವ್ಯಕ್ಕೆ ಧಕ್ಕೆಯಾಗದಂತೆ ನಿಯಮ ರೂಪಿಸಿಕೊಳ್ಳಲಿ: ಕೇರಳ ಸರಕಾರದ ಮಲೆಯಾಳಂ ಭಾಷೆ ಕಡ್ಡಾಯ ಕಾಯ್ದೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಅವರವರ ರಾಜ್ಯದ ಭಾಷೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸಹಜ. ಕಾಸರಗೋಡು ಕರ್ನಾಟಕದ ಭಾಗ ಎಂಬುದು ನಮ್ಮ ಪ್ರತಿಪಾದನೆ, ಅಲ್ಲಿನ ಕನ್ನಡಿಗರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಆ ಸರಕಾರದ ಕೆಲಸ. ಕೇರಳ ಸರಕಾರ ಒತ್ತಡ ಹೇರುತ್ತಿರುವುದು ಗಡಿ ಭಾಗದಲ್ಲಿ ಉತ್ತಮ ವಾತಾವರಣ ಇರಲು ಸಾಧ್ಯವಿಲ್ಲ. ಕೇರಳ ಹಾಗೂ ಕರ್ನಾಟಕ ಉತ್ತಮ ಬಾಂಧವ್ಯ ಹೊಂದಿದ್ದು, ಇದಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ ಎಂದರು.

ಹತ್ತು ವರ್ಷಗಳಿಂದ ಅವರೇ ಅಧಿಕಾರದಲ್ಲಿದ್ದರು. ಈಗ ಇದನ್ನು ಮಾಡುತ್ತಿದ್ದಾರೆ ಎಂದರೆ ಇದು ಚುನಾವಣೆ ರಾಜಕಾರಣವಷ್ಟೇ. ಕಾಸರಗೋಡಿನಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಅನೇಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮಲೆಯಾಳಂ ಕಲಿಸಬೇಡಿ ಎಂದು ನಾವು ಹೇಳುತ್ತಿಲ್ಲ. ಕನ್ನಡಿಗರಿಗೆ ತೊಂದರೆಯಾಗದ ರೀತಿ ನಿಯಮಗಳಿರಲಿ ಎಂಬುದು ನಮ್ಮ ಒತ್ತಾಯ ಎಂದು ಸುರೇಶ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News